ವಿಜಯಸಾಕ್ಷಿ ಸುದ್ದಿ, ಗದಗ
ಡ್ರಾಪ್ ಕೇಳುವ ನೆಪದಲ್ಲಿ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಸುಲಿಗೆ ಮಾಡಿ ಪರಾರಿಯಾಗಿದ್ದ ಮೂವರು ಖದೀಮರನ್ನು ದೂರು ದಾಖಲಿಸಿಕೊಂಡ 48 ಗಂಟೆಯೊಳಗೆ ಬಂಧಿಸುವಲ್ಲಿ ಬಡಾವಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸಂಭಾಪೂರ ರಸ್ತೆಯ ಸಿದ್ದಾರ್ಥ ನಗರದ ನಿವಾಸಿಗಳಾದ ಪ್ರತಾಪ್ ತಂದೆ ಧರ್ಮಣ್ಣ ಹೊಸಮನಿ(32) ಕಿಶೋರ್ ತಂದೆ ಯಲ್ಲಪ್ಪ ಕಟ್ಟಿಮನಿ (25) ಹಾಗೂ ಶಿವಕುಮಾರ್ ತಂದೆ ನಾಗಪ್ಪ ಗುಡಿಮನಿ ಎಂದು ಗುರುತಿಸಲಾಗಿದೆ.
ಕಳೆದ ಭಾನುವಾರ 18-02-2024ರಂದು ಸಂಜೆ ಆರು ಗಂಟೆ ಸುಮಾರಿಗೆ ಆಟೋ ಚಾಲಕ ಬಸವರಾಜ್ ಹಡಗಲಿಗೆ ಡ್ರಾಪ್ ಕೇಳುವ ನೆಪದಲ್ಲಿ ಆಟೋ ಹತ್ತಿದ್ದರು. ಮುಂದೆ ಎಪಿಎಂಸಿ ಜಾನುವಾರು ಮಾರುಕಟ್ಟೆ ಬಳಿ ಚಾಲಕ ಬಸವರಾಜ್ ಮೇಲೆ ಹಲ್ಲೆ ಮಾಡಿ ಆತನ ಬಳಿ ಇದ್ದ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದರು.
ಆದರೆ ಆಟೋ ಚಾಲಕ ಬಸವರಾಜ್ ದಿ.26-02-2024ರಂದು ರಾತ್ರಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಬಡಾವಣೆ ಪೊಲೀಸರು, ಎಸ್ಪಿ ಬಿ.ಎಸ್.ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ, ಡಿವೈಎಸ್ಪಿ ಜೆ.ಎಚ್. ಇನಾಮದಾರ ಮಾರ್ಗದರ್ಶನದಲ್ಲಿ, ಸಿಪಿಐ ಧೀರಜ್ ಶಿಂದೆ ನೇತೃತ್ವದಲ್ಲಿ ಪಿಎಸ್ಐ ವಿಜಯಕುಮಾರ್ ತಳವಾರ, ಎಎಸ್ಐಗಳಾದ ಬಿ.ಎಫ್. ಯರಗುಪ್ಪಿ, ಆರ್.ಜಿ.ಬೇವಿನಕಟ್ಟಿ, ಸಿಬ್ಬಂದಿಗಳಾದ ಪರಶುರಾಮ ದೊಡಮನಿ, ಅಶೋಕ ಗದಗ, ನಾಗರಾಜ್ ಭರಡಿ ಕಾರ್ಯಾಚರಣೆ ನಡೆಸುವ ಮೂಲಕ ಮೂವರು ಖದೀಮರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಈ ಕಾರ್ಯಚರಣೆಗೆ ಎಸ್ಪಿ ಬಿ.ಎಸ್. ನೇಮಗೌಡ ಶ್ಲಾಘಿಸಿದ್ದಾರೆ.