ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗಜೇಂದ್ರಗಡ ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೇರ್‌ಫೂಟ್ ಟೆಕ್ನಿಷಿಯನ್(ಬಿಎಫ್‌ಟಿ)ಗಳಿಗೆ ಕಳೆದ 5 ತಿಂಗಳಿಂದ ಸಂಬಳವಾಗದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಅವರಿಗೆ ಮನವಿ ಸಲ್ಲಿಸಿದರು.
ಗಜೇಂದ್ರಗಡ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ 4 ಬೇರ್‌ಫೂಟ್ ಟೆಕ್ನಿಷಿಯನ್‌ಗಳ ಸಹಿತ ಕರ್ನಾಟಕ ರಾಜ್ಯ ನರೇಗಾ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ರಾಜ್ಯ ಬೇರ್‌ಫೂಟ್ ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘದಿಂದ ಸಲ್ಲಿಸಲಾದ ಈ ಮನವಿಯಲ್ಲಿ, ಕಳೆದ ಮಾರ್ಚ್ ತಿಂಗಳಿನಿಂದ ಸಂಬಳ ಪಾವತಿ ಯಾಗದ ಇರುವುದರಿಂದ ತೀವ್ರ ಆರ್ಥಿಕ ತೊಂದರೆ ಎದುರಾಗಿದೆ ಎಂದು ತಿಳಿಸಲಾಗಿದೆ.
ಬೇರ್‌ಫೂಟ್ ಟೆಕ್ನಿಷಿಯನ್‌ಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಬಾಕಿ ಉಳಿಸಿ ಕೊಂಡಿರುವ ಸಂಬಳವನ್ನು ತಕ್ಷಣ ಪಾವತಿಸಲು ಮತ್ತು ಭವಿಷ್ಯದಲ್ಲಿ ಸಕಾಲದಲ್ಲಿ ವೇತನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಮನವಿ ಸ್ವೀಕರಿಸಿ, ಸಂಬಳ ಇಲ್ಲದೆ ಬದುಕು ನಡೆಸುವುದು ಕಷ್ಟ. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಸಂಬಳ ತಡವಾಗಿದೆ. ಶೀಘ್ರವಾಗಿ ನಿಮ್ಮ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.
ಬಿಎಫ್‌ಟಿಗಳಾದ ಚಂದ್ರಕಾಂತ ಲಮಾಣಿ, ಶಂಕರಗೌಡ ಪಾಟೀಲ್, ರವಿ ಹೊಂಬಳ, ಜ್ಯೋತಿ ವಡ್ಡರ ಹಾಗೂ ನರೇಗಾ ಸಿಬ್ಬಂದಿಗಳಾದ ಗುರು ಪಕೀರಗೌಡ, ಸುನೀಲ ಶಿರೋಳ, ಪ್ರಕಾಶ್ ಮ್ಯಾಕಲ್, ಅಜಯ್ ಹೂಗಾರ, ಪ್ರವೀಣ ಗಾಮನಕಟ್ಟಿ ಮುಂತಾದವರು ಹಾಜರಿದ್ದರು.