ವಿಜಯಸಾಕ್ಷಿ ಸುದ್ದಿ, ಗದಗ : ಜಗಜ್ಯೋತಿ ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಹೆಜ್ಜೆ ಹಾಕುವುದು ಸೂಕ್ತವಾಗಿದೆ. ಮಹಾಮಾನವತಾವಾದಿ ವಿಶ್ವ ಗುರು, ಸಮ ಸಮಾಜ ಕಟ್ಟುವುದರಲ್ಲಿ ಯಶಸ್ವಿಯಾದವರು ಹಾಗೂ ಮೊಟ್ಟ ಮೊದಲನೇ ಸಂಸದೀಯ ವ್ಯವಸ್ಥೆ ಹುಟ್ಟುಹಾಕಿದವರೇ ಪೂಜ್ಯ ಬಸವಣ್ಣನವರು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರದಂದು ಕರ್ನಾಟಕ ಸಾಂಸ್ಕೃತಿಕ ನಾಯಕರಾದ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ, ಭಾವಚಿತ್ರಕ್ಕೆ ಪುಷ್ಪಾಚನೆ ಸಲ್ಲಿಸಿ ಅವರು ಮಾತನಾಡಿದರು.
ಮಹಾಮಾನವತಾವಾದಿ ವಿಶ್ವ ಗುರು ಬಸವಣ್ಣರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಇತ್ತೀಚೆಗೆ ಸಾಂಸ್ಕೃತಿಕ ನಾಯಕರೆಂದು ಗುರುತಿಸಿ ಗೌರವಿಸಿ ಅಧಿಕೃತಗೊಳಿಸಿದೆ. ಬಸವಣ್ಣನವರು ರಾಜ್ಯದ ಸಾಂಸ್ಕೃತಿಕ ನಾಯಕರಾಗಿರುವುದು ನಮ್ಮ ಹೆಮ್ಮೆ ಎಂದರು.
ಮಹಾತ್ಮಾ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ವಿಶ್ವಗುರು ಬಸವಣ್ಣ ಅವರುಗಳ ಭಾವಚಿತ್ರಗಳನ್ನು ಕಚೇರಿಯಲ್ಲಿ ಅಳವಡಿಸಲಾಗುತ್ತಿದೆ. ಅದರಂತೆ ಸಂವಿಧಾನ ಪೀಠಿಕೆಯನ್ನೂ ಸಹ ಅಳವಡಿಸಲಾಗುತ್ತಿದೆ. ಇದರರ್ಥ, ಅಂತಹ ಮಹಾನ್ ಪುರುಷರ ಜೀವನ ಸಂದೇಶ, ಮೌಲ್ಯಗಳನ್ನು ಸರ್ಕಾರಿ ನೌಕರರು ಹಾಗೂ ಜನಸಾಮಾನ್ಯರು ಅರಿತು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಲು ಪ್ರೇರಣೆಯಾಗಲಿ ಎಂಬ ಸದುದ್ದೇಶವನ್ನು ಸರ್ಕಾರ ಹೊಂದಿದೆ. ಬಸವಣ್ಣನವರ ಭಾವಚಿತ್ರಗಳನ್ನು ಎಲ್ಲ ಜಿಲ್ಲಾ, ತಾಲೂಕಾ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಹಾಕುವುದರಿಂದ ಪ್ರತಿಯೊಬ್ಬರೂ ತಮ್ಮ ವ್ಯಕ್ತಿತ್ವ ಸರಿಪಡಿಸಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಬಸವಣ್ಣನವರು ಸಮಾಜದಲ್ಲಿ ಓರೆ-ಕೋರೆಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಅವರ ಸಂದೇಶಗಳಲ್ಲಿನ ಭಕ್ತಿ-ಭಯಗಳ ಮುಖಾಂತರ ನಾವು ನಮ್ಮ ನಡುವಳಿಕೆ, ನಿಲುವನ್ನು ಸುಧಾರಿಸಿಕೊಳ್ಳಲು ಬದಲಾವಣೆ ತಂದುಕೊಳ್ಳಬೇಕು. ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರನ್ನು ಹೊಗಳುವುದಕ್ಕಿಂತ ಅವರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಪರಿಪಾಲಿಸಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು. ಆಡಳಿತದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಸಚಿವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ, ಗಣ್ಯರುಗಳಾದ ಜಿ.ಎಸ್. ಗಡ್ಡದೇವರಮಠ, ಸಿದ್ದು ಪಾಟೀಲ, ಪ್ರೊ. ಕೆ.ಎಚ್. ಬೇಲೂರ, ಎಸ್.ಎನ್. ಬಳ್ಳಾರಿ, ಬಸವರಾಜ ಕಡೆಮನಿ, ಪ್ರಭು ಬುರಬುರೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಂಘ-ಸಂಸ್ಥೆಯವರು ಹಾಜರಿದ್ದರು.
ಬಾಹುಬಲಿ ಜೈನರ ಕಾರ್ಯಕ್ರಮ ನಿರ್ವಹಿಸಿದರು. ಡಾ.ವೆಂಕಟೇಶ ಅಲ್ಕೋಡ ನಾಡಗೀತೆ ಪ್ರಸ್ತುತಪಡಿಸಿದರು.
೧೨ನೇ ಶತಮಾನದಲ್ಲಿಯೇ ಬಸವಣ್ಣನವರು ಮಹಿಳಾ ಸಬಲೀಕರಣ ಹಾಗೂ ಸಮಾನತೆಗಾಗಿ ಹೋರಾಟ ನಡೆಸಿದವರಾಗಿದ್ದಾರೆ. ಪ್ರಜಾಪ್ರಭುತ್ವಕ್ಕೆ ಬಸವಣ್ಣನವರು ಭದ್ರ ಬುನಾದಿ ಹಾಕಿದವರು. ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳು ಕಾಯಕ ದಾಸೋಹದ ಅರ್ಥ ವ್ಯವಸ್ಥೆಯಲ್ಲಿ ಎಲ್ಲರ ಮನಸ್ಸನ್ನು ಜಾಗೃತಗೊಳಿಸುತ್ತವೆ. ಪ್ರತಿಯೊಬ್ಬರೂ ಬಸವಣ್ಣನವರ ವಿಚಾರಗಳಿಗೆ ಕೈಜೋಡಿಸುವ ಮೂಲಕ ಸಮಾಜ ಸುಧಾರಣೆಗೆ ಮುಂದಾಗಬೇಕಿದೆ.
– ಎಚ್.ಕೆ. ಪಾಟೀಲ.
ಕಾನೂನು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವರು.
ಅರ್ಥಶಾಸ್ತ್ರವನ್ನು ಕಾರ್ಲ್ ಮಾರ್ಕ್ಸ್ಗಿಂತ ಉತ್ತಮವಾಗಿ ಮಹಾಮಾನವತಾವಾದಿ ಬಸವಣ್ಣನವರು ಬೋಧಿಸಿದ್ದಾರೆ. ದುಡಿದು ತಿನ್ನಬೇಕು, ನಿಮ್ಮ ಕಾಯಕದ ಆದಾಯದಲ್ಲಿ ದಾಸೋಹ ಮಾಡಬೇಕು, ಕಾಯಕನಿಷ್ಠ ಸಮಾಜ ನಿರ್ಮಾಣದಲ್ಲಿ ಬಸವಣ್ಣನವರ ಶ್ರಮ ಅಪರಿಮಿತವಾದದ್ದು ಎಂದು ಬಸವಣ್ಣನವರ ಆಚಾರ-ವಿಚಾರಗಳ ಬಗ್ಗೆ ಸಚಿವ ಎಚ್.ಕೆ. ಪಾಟೀಲರು ತಮ್ಮದೇ ಶೈಲಿಯಲ್ಲಿ ವಿವರಿಸಿದರು.