ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿ ಒಂದು ವರ್ಷವಾಗಿದೆ. ಬಸವಣ್ಣನವರು ಕರ್ನಾಟಕ ಮಾತ್ರವಲ್ಲ, ವಿಶ್ವದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಕಾರಣ ಅವರು ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ನೈತಿಕ, ಸಾಂಸ್ಕೃತಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪರಿವರ್ತನೆ ತಂದವರು. ಜಾತಿ, ಮತ, ಲಿಂಗ, ಬಡವ-ಬಲ್ಲಿದ ಎಂಬ ಬೇಧವಿಲ್ಲದ ಸಮಾಜವನ್ನು ನೆಲೆಗೊಳಿಸಿದವರು ಎಂದು ಲಿಂಗಾಯತ ಮಠಾಧೀಶರ ಒಕ್ಕೂಟದ ಮುಖ್ಯಸ್ಥರಾದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಸೆಪ್ಟೆಂಬರ್ 9, 2025ರಂದು ಗದಗ ಜಿಲ್ಲಾ ಕೇಂದ್ರಕ್ಕೆ ‘ಬಸವ ಸಂಸ್ಕೃತಿ ಅಭಿಯಾನ’ ಆಗಮಿಸಲಿರುವ ಹಿನ್ನೆಲೆಯಲ್ಲಿ ಶ್ರೀ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ಜೆ.ಎಲ್.ಎಂ. ಜಿಲ್ಲಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಕೆ.ಎ.ಬಳಿಗೇರ, ಮುಂಡರಗಿ ತಾಲೂಕು ಜಾ.ಲಿಂ. ಮಹಾಸಭಾ ಅಧ್ಯಕ್ಷ ನವಲಗುಂದ ಮಾತನಾಡಿದರು.
ಗದಗ ಬೆಟಗೇರಿ ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಈ ಅಭಿಯಾನಕ್ಕೆ ಬಸವ ದಳದ ವತಿಯಿಂದ 10 ಸಾವಿರ, ಗಜೇಂದ್ರಗಡ ತಾಲೂಕು ಶ.ಸಾ.ಪ. ಅಧ್ಯಕ್ಷ ಬಸವರಾಜ ಕೊಟಗಿ ತಾಲೂಕಿನ ವತಿಯಿಂದ 25 ಸಾವಿರ, ಬಸವರಾಜ ಹಿರೇಹಡಗಲಿ 25 ಸಾವಿರ, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ವೈಯಕ್ತಿಕವಾಗಿ 10 ಸಾವಿರ ರೂ ಹಾಗೂ ಜಾತ್ರಾ ಕಮಿಟಿಯ ವತಿಯಿಂದ 25 ಸಾವಿರ, ಈರಣ್ಣ ಮುದಗಲ್ಲ 5 ಸಾವಿರ, ಪ್ರೊ. ಎನ್.ಎಮ್. ಪವಾಡಿಗೌಡ್ರ 5 ಸಾವಿರ, ಶಿವಕುಮಾರ ರಾಮನಕೊಪ್ಪ 10 ಸಾವಿರ, ಶರಣು ಗದಗ 10 ಸಾವಿರ, ಎಸ್.ಎಸ್. ಕಳಸಾಪೂರಶೆಟ್ರ 5 ಸಾವಿರ, ಎಸ್.ಎಸ್. ಶೆಟ್ಟರ ವಕೀಲರು 25 ಸಾವಿರ, ರತ್ನಕ್ಕ ಪಾಟೀಲ 2 ಸಾವಿರ ಹಾಗೂ ಷಣ್ಮುಖ ನಂದಗಾವಿ 1 ಸಾವಿರ ರೂಪಾಯಿಗಳನ್ನು ಕೊಡುವ ವಾಗ್ದಾನ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಜೆ.ಎಲ್.ಎಂ. ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಚಟ್ಟಿ ಅವರು ವಹಿಸಿದ್ದರು. ಸಭೆಗೆ ಬಂದವರಿಗೆ ಧನ್ಯವಾದ ಹೇಳಿದರು. ಪಾಲಾಕ್ಷಿ ಗುಣದಿನ್ನಿ, ಬಸವರಾಜ ಅಂಗಡಿ, ಗೌರಕ್ಕ ಬಡಿಗಣ್ಣವರ, ಗಿರಿಜಾ ಹಸಬಿ, ಪ್ರೊ. ಕೆ.ಎಚ್. ಬೇಲೂರ, ಚನ್ನಬಸಪ್ಪ ಕಂಠಿ ಮತ್ತಿತರರು ಮಾತನಾಡಿದರು. ಸಭೆಯಲ್ಲಿ ಜಾ.ಲಿಂ. ಮಹಾಸಭಾ, ಬಸವದಳ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಬಸವ ಕೇಂದ್ರ, ತೋಂಟದಾರ್ಯ ಜಾತ್ರಾ ಸಮಿತಿ, ಲಿಂಗಾಯತ ಪ್ರಗತಿಶೀಲ ಸಂಘ, ಯೋಗ ಪಾಠಶಾಲೆ, ಕುಂಬಾರ, ಮಡಿವಾಳ, ಹಡಪದ ಸಮಾಜ, ದಲಿತ, ಪ್ರಗತಿಪರ ಸಂಘಟನೆಗಳ ಪ್ರಮುಖರು, ಎಲ್ಲಾ ತಾಲೂಕುಗಳ ಲಿಂಗಾಯತ, ಬಸವಪರ ಸಂಘಟನೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗಿಯಾಗಿದ್ದರು. ಶರಣ ಪ್ರಕಾಶ ಅಸುಂಡಿ ಸ್ವಾಗತಿಸಿದರೆ, ಶರಣೆ ಮಂಜುಳಾ ಹಾಸಿಲಕರ ವಚನ ಮಂಗಲ ಹಾಡಿದರು.
ಇಂಥ ದಾರ್ಶನಿಕರ ಆಶಯದಂತೆ ಸಮಸಮಾಜ ನಿರ್ಮಾಣ, ವ್ಯಸನಮುಕ್ತ ಸಮಾಜ ನಿರ್ಮಾಣ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವದು, ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಆಧ್ಯಾತ್ಮದ ಅರಿವನ್ನು ಮೂಡಿಸುವದು, ಮಹಿಳೆಯರ ಘನತೆಯನ್ನು ಕಾಪಾಡುವದು, ವ್ಯಕ್ತಿತ್ವ ವಿಕಸನ ಇತ್ಯಾದಿ ಈ ಬಸವ ಸಂಸ್ಕೃತಿ ಅಭಿಯಾನದ ಆಶಯಗಳಾಗಿವೆ. ಆದ್ದರಿಂದ ಈ ಅಭಿಯಾನದಲ್ಲಿ ನಾವು ನೀವೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸೋಣ. ಈ ಅಭಿಯಾನದ ಕಾರ್ಯಕ್ರಮಕ್ಕೆ ಎಲ್ಲರೂ ತನು, ಮನ, ಧನ ಸಹಾಯ-ಸಹಕಾರ ನೀಡಬೇಕು ಎಂದು ತೋಂಟದ ಶ್ರೀಗಳು ಹೇಳಿದರು.