ವಿಜಯಸಾಕ್ಷಿ ಸುದ್ದಿ, ಗದಗ: ಕೋಲ ಶಾಂತರಸರು ಅನುಭವಮಂಟಪದಲ್ಲಿ ಎಲ್ಲ ಶರಣರು ರಚಿಸಿದ ವಚನಗಳನ್ನು ತಾಳೆಗರಿಯಲ್ಲಿ ಬರೆದಿಡುವ ಕೆಲಸ ಮಾಡುತ್ತಿದ್ದರು. ಭೈರವೇಶ್ವರ ಕಾವ್ಯದ ಕಥಾಮಣಿ ಸ್ತೋತ್ರರತ್ನಾಕರದಲ್ಲಿ ಹೇಳಿರುವಂತೆ, ಇವರು ಕಟ್ಟಿಗೆ ಅಥವಾ ಕೋಲನ್ನು ಹಿಡಿದು ಕಾಯಕ ನಡೆಸುತ್ತಿದ್ದರಂತೆ. ಇವರ ಒಟ್ಟು 103 ವಚನಗಳು ದೊರಕಿವೆ. ವಚನಾಂಕಿತ ಭೀಮೇಶ್ವರಲಿಂಗ ನಿರಂಗಸಂಗ ಎಂದು. ಅಲ್ಲದೇ ಶಾಂತರಸರು ಅನುಭವ ಮಂಟಪದಲ್ಲಿ ಪ್ರಮುಖ ವಚನಕಾರರಾಗಿದ್ದಾರೆ. ಇಂದು ಇವರ ವಚನವನ್ನು ಬಿಡಿಸಲಾಗುತ್ತಿದೆ ಎಂದು ಶರಣ ತತ್ವ ಚಿಂತಕರಾದ ಪ್ರಕಾಶ ಅಸುಂಡಿ ತಿಳಿಸಿದರು.
ಅವರು ಬಸವದಳದ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಗಳ ಸಂಯುಕ್ತಾಶ್ರಯದಲ್ಲಿ, ಸಿದ್ರಾಮಯ್ಯ ಪಂಚಾಕ್ಷರಯ್ಯ ಸಂಸಿಮಠ ಇವರ ಮನೆಯಲ್ಲಿ ನಡೆದ ಬಸವಣ್ಣನವರ 858ನೇ ಸ್ಮರಣೆಯಂಗವಾಗಿ `ವಚನ ಶ್ರಾವಣ-2025’ರ 12ನೇ ದಿನದ ಕಾರ್ಯಕ್ರಮದಲ್ಲಿ ವಚನ ನಿರ್ವಚನಗೈದರು.
ಆಕಾರ ಎಂಬ ಶಬ್ಧ ಲಿಂಗ ತತ್ವವನ್ನು ಸೂಚಿಸುತ್ತದೆ. ಈರ್ವರ ಒಳ ಚೈತನ್ಯ ಒಂದೇ ಆಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ಇಷ್ಟಲಿಂಗ ಬಸವಣ್ಣನಿಂದಲೇ ಉದಿಸಿದ್ದೆಂದು ಹೇಳುವರು. ಅನೇಕ ಶರಣರು ಈಗಾಗಲೇ ತಮ್ಮ ವಚನಗಳಲ್ಲಿ ಇಷ್ಟಲಿಂಗ ಜನಕ ಬಸವಣ್ಣನೇ ಎಂದು ಸಾರಿದ್ದಾರೆ. ಅದೇ ರೀತಿ ಕೋಲಶಾಂತರಸರು ಕೂಡಾ ಅದನ್ನೇ ಹೇಳಿದ್ದಾರೆ. ಲಿಂಗತತ್ವ ಹುಟ್ಟಿದ್ದೇ ಧರ್ಮಗುರು ಬಸವಣ್ಣನವರಿಂದ. ನಿರಾಕಾರ ಪರಮಾತ್ಮನನ್ನು ಆಕಾರ ಸ್ವರೂಪಿಯನ್ನಾಗಿ ಇಷ್ಟಲಿಂಗ ರೂಪದಲ್ಲಿ ನಮಗೆ ನೀಡಿದ ಗುರುವನ್ನು ಶಾಂತರಸರು ನೆನೆವರು ಎಂದರು.
ಲಿಂಗವನ್ನು ಅರಿವಿನ ಕುರುಹೆಂದು ಹೇಳಲಾಗುತ್ತಿದೆ. ತನ್ನರಿವುದೇ ಲಿಂಗ ತತ್ವ. ನನಗೆ, ನಿನಗೆ ಕೊನೆಗೆ ದೇವರೆನ್ನುವ ಲಿಂಗಕ್ಕೂ ಗುರುವಾಗಿದ್ದಾರೆ. ಇದರಲ್ಲಿ ಇಷ್ಟಲಿಂಗ ಹಾಗೂ ಗುರು ಬಸವಣ್ಣನವರನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಬಸವಣ್ಣನವರ ತತ್ವವನ್ನು, ಜ್ಞಾನ ನೀಡಿದ ಗುರುವನ್ನು, ಲಿಂಗ ನೀಡಿದ ಗುರುವಿನ ಪಾದಗಳಿಗೆ ನಮೋ ನಮೋ ಎನ್ನುವರು. ಶರೀರ ಉಪಯುಕ್ತವಾದದ್ದು, ಅದೇ ಕಾರಣಕ್ಕಾಗಿ ಹೊರ ದೇಹಕ್ಕಿಂತ ಒಳಗಿನ ಅರಿಷಡ್ವರ್ಗಗಳನ್ನು ಸುಟ್ಟರೆ ಮಾತ್ರ ಮನುಷ್ಯನಾಗಲು ಸಾಧ್ಯವೆನ್ನುವರು. ಇಂತಹ ಅದ್ಭುತ ಲಿಂಗ ತತ್ವ ನೀಡಿದ ಬಸವ ಗುರುವನ್ನು ವಚನಕಾರರು ಮನಃಪೂರ್ವಕವಾಗಿ ನೆನೆಸುವರು ಎಂದರು.
ಬಸವದಳದ ಶರಣೆಯರು ವಚನ ಪ್ರಾರ್ಥನೆ ಹಾಡಿದರು. ಸಿದ್ರಾಮಯ್ಯ ಸಂಸಿಮಠ ಸ್ವಾಗತಿಸಿದರು. ಗೌರಕ್ಕ ಬಡಿಗಣ್ಣನವರ ನಿರೂಪಿಸಿದರು.
ಚಿಂತಕರಾದ ಅಶೋಕ ಬರಗುಂಡಿ ಮಾತನಾಡುತ್ತಾ, ಶರಣರು ಇಲ್ಲಿ ಬ್ರಹ್ಮಾಂಡವನ್ನೇ ಪ್ರಣತಿಯನ್ನಾಗಿಸಿದ್ದಾರೆ. ಆ ಪ್ರಣತಿಯಲ್ಲಿ ಬೆಳಗುವ ಜ್ಯೋತಿಯೇ ಬಸವಣ್ಣನಾಗಿದ್ದಾರೆ. ಅದು ಜ್ಞಾನದ ಶಿವಜ್ಯೋತಿಯಾಗಿದೆ. ಯಾವ ಮೂಲಬೀಜ ಬಿತ್ತುವೆವೋ ಅದೇ ಮೂಲ ತರಹದ ಮರ ಹುಟ್ಟುವುದು. ಹಾಗೆ ಬಸವಣ್ಣನವರ ಭಕ್ತಿತತ್ವದ ಬೀಜ ಬಿತ್ತಿದರೆ ಭಕ್ತಿಯ ಮರವನನ್ನು ಪಡೆಯಬಹುದು ಎಂಬುದು ವಚನಕಾರರ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.