ವಿಜಯಸಾಕ್ಷಿ ಸುದ್ದಿ, ಗದಗ : 12ನೇ ಶತಮಾನದಲ್ಲಿ ಸಮಾಜೋಧಾರ್ಮಿಕ ಚಳವಳಿಯ ನೇತೃತ್ವ ವಹಿಸಿ, ಸಮಾಜದ ಓರೆಕೋರೆಗಳನ್ನು ತಿದ್ದಿ, ಸಮಸಮಾಜದ ನಿರ್ಮಾಣಕ್ಕೆ ಎಲ್ಲರ ಜೊತೆಗೂಡಿ ಹೆಜ್ಜೆ ಹಾಕಿದ ವ್ಯಕ್ತಿ ಬಸವಣ್ಣ. ಇಷ್ಟಲಿಂಗದ ಮೂಲಕ ದೇಹವನ್ನೇ ದೇವಾಲಯವಾಗಿಸಿ ಆಧ್ಯಾತ್ಮಿಕ ಸಮಾನತೆಯನ್ನು, ಕಾಯಕಕ್ಕೆ ದೈವಿಕತೆಯನ್ನು, ದಾಸೋಹಕ್ಕೆ ಶ್ರೇಷ್ಠತೆಯನ್ನು ತಂದುಕೊಟ್ಟು ದಯಯೇ ಧರ್ಮವೆಂದು ಸಾರಿ ಜಗತ್ತಿನ ಜನರಿಗೆ ನಡೆ-ನುಡಿ, ಸಿದ್ಧಾಂತವನ್ನು ಪ್ರತಿಪಾದಿಸಿದವರು ವಿಶ್ವಗುರು ಬಸವಣ್ಣನವರು. ಬಹುತ್ವದ ಭಾರತಕ್ಕೆ ಬಸವಣ್ಣನೇ ಬೆಳಕು ಎಂದು ಚಿಂತಕ ಅಶೋಕ ಬರಗುಂಡಿ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ `ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಅಂಬೇಡ್ಕರರು ರಚಿಸಿದ ಸಂವಿಧಾನದಲ್ಲಿ ಮತ್ತು ವಿಶ್ವಸಂಸ್ಥೆ ಪ್ರತಿಪಾದಿಸಿದ ಮಾನವ ಹಕ್ಕುಗಳಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಮೌಲ್ಯಗಳ ತಿರುಳನ್ನು ಕಾಣುತ್ತೇವೆ. ಎಲ್ಲರಲ್ಲಿರುವ ಮೂಲ ವಸ್ತು ಒಂದೇ ಆಗಿರುವದರಿಂದ ಭೇದಭಾವ ಸಲ್ಲದು. ಬಹುತ್ವದ ಭಾರತಕ್ಕೆ ಬಸವಣ್ಣನವರ ವಿಚಾರಗಳೇ ಪ್ರಧಾನವಾಗಿವೆ.
ಬಸವಣ್ಣ ಈ ಕಾಲದ ಅನಿವಾರ್ಯ ಹಾಗೂ ಮಾದರಿ ವ್ಯಕ್ತಿ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕನಾಗಿ ನಮ್ಮ ಮನೆ-ಮನ ಬೆಳಗುವ ವ್ಯಕ್ತಿಯಾಗಿದ್ದಾನೆ ಎಂದು ತಿಳಿಸಿದರು.
ಬಸವಣ್ಣನವರ ಜೀವನ ಚರಿತ್ರೆಯ ಕುರಿತಾದ ಛಾಯಾಚಿತ್ರಗಳನ್ನು ಹೆಸರಾಂತ ಚಿತ್ರ ಕಲಾವಿದ, ಸಾಹಿತಿ ಪುಂಡಲೀಕ ಕಲ್ಲಿಗನೂರ ಪ್ರದರ್ಶಿಸಿ, ವಿವರಿಸಿದರು.
ಈ ಸಂದರ್ಭದಲ್ಲಿ ನೀಲಗಂಗಾ ಪ್ರಕಾಶನದಿಂದ ಪ್ರಕಟಿಸಿದ ಟಿ.ಆರ್. ಚಂದ್ರಶೇಖರ ರಚಿಸಿದ `ಬಸವಪ್ರಣೀತ ಲಿಂಗಾಯತಧರ್ಮ’ ಪುಸ್ತಕವನ್ನು ಜಿಲ್ಲಾ ಖಜಾನೆ ಅಧಿಕಾರಿಗಳು ಹಾಗೂ ಸಾಹಿತಿ ವಿ. ಹರಿನಾಥಬಾಬು ಲೋಕಾರ್ಪಣೆಗೊಳಿಸಿದರು. ವೇದಿಕೆಯ ಮೇಲೆ ಪ್ರಗತಿಪರ ಚಿಂತಕ ಶೇಕಣ್ಣ ಕವಳಿಕಾಯಿ ಉಪಸ್ಥಿತರಿದ್ದರು.
ಶ್ರೀಕಾಂತ ಬಡ್ಡೂರ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸಿದ್ದಲಿಂಗೇಶ ಸಜ್ಜನಶೆಟ್ಟರ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಜಿ.ಬಿ. ಪಾಟೀಲ, ಪ್ರೊ. ಅನ್ನದಾನಿ ಹಿರೇಮಠ, ಡಾ. ಶಂಕರ ಬಾರಿಕೇರ, ಪ್ರೊ. ಚಂದ್ರಶೇಖರ ವಸ್ತçದ, ಸುರೇಶ ಕುಂಬಾರ, ರಾಜಶೇಖರ ಕರಡಿ, ಡಾ. ನಾಗರಾಜ ಬಳಿಗೇರ, ಡಾ. ಬಿ.ಎಲ್. ಚವ್ಹಾಣ, ಮರಳಸಿದ್ದಪ್ಪ ದೊಡ್ಡಮನಿ, ಅಶೋಕ ಸುತಾರ, ಪ್ರೊ. ಆಯ್.ಎಸ್. ಹಿರೇಮಠ, ನಾಗಭೂಷಣ ಬಡಿಗಣ್ಣವರ, ಗೌರಕ್ಕ ಬಡಿಗಣ್ಣವರ, ಶಿವನಗೌಡ ಗೌಡರ, ಬಸವರಾಜ ಕೂಗು, ಎಂ.ಪಿ. ಪಾಟೀಲ, ಎಂ.ಎಸ್. ಗೌಡಪ್ಪಗೌಡರ, ಬಿ.ಆರ್. ಹೊಸಮನಿ, ಡಿ.ಎನ್. ವಜ್ರೇಶ್ವರಿ, ಪಿ.ಎಸ್. ಹಿರೇಮಠ, ವಿ.ಆರ್. ಮುಂಬರಡ್ಡಿ, ಬಿ.ವಿ. ಅಂಗಡಿ, ರಮೇಶ ಪೂಜಾರ, ಎಸ್.ಆರ್. ಚನ್ನಪ್ಪಗೌಡರ, ವಿ.ಎಸ್.ದಲಾಲಿ, ಅಜಿತ ಘೋರ್ಪಡೆ, ಶಶಿಕಾಂತ ಕೊರ್ಲಳ್ಳಿ, ಆರ್.ಡಿ. ಕಪ್ಪಲಿ, ಪ್ರೊ. ಶಕುಂತಲಾ ಸಿಂಧೂರ, ಎಸ್.ಎಂ. ಕಾತರಕಿ, ಸುಧಾ ಬಳ್ಳಿ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ಉಮಾದೇವಿ ಕಣವಿ, ಜಯಶ್ರೀ ಅಂಗಡಿ, ರೇಣುಕಾ ಹಾಸಲಕರ, ಮಂಜುಳಾ ಹಾಸಲಕರ, ಎಂ.ಸಿ. ದೊಡ್ಡಮನಿ, ಎಸ್.ಸಿ. ಹಾಲಕೇರಿ, ಎಂ. ಎಫ್.ಡೋಣಿ, ಶಿವಪುತ್ರವ್ವ ಕಣವಿ, ಎಂ.ಸಿ. ಹುಚ್ಚಮ್ಮನವರ, ರಮೇಶ ತೋಟದ, ಆರ್.ಬಿ. ಪಾಟೀಲ, ಶಿವಾನಂದ ಭಜಂತ್ರಿ, ಅಪ್ಪಣ್ಣ ಕಲ್ಲಿಗನೂರ, ಶಂಕರ ಕಲ್ಲಿಗನೂರ ಹಾಜರಿದ್ದರು.
ಅಧ್ಯಕ್ಷತೆ ವಹಿಸಿ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಭಾರತ ಆಧ್ಯಾತ್ಮಿಕತೆಯ ನೆಲೆವೀಡು. 12ನೇ ಶತಮಾನದಲ್ಲಿ ಆಧ್ಯಾತ್ಮಕ್ಕೂ ಕೂಡಾ ಹೊಸ ಭಾಷ್ಯ ಬರೆದವರು ಶರಣರಾಗಿದ್ದಾರೆ. ಲೌಕಿಕ ಮತ್ತು ಪಾರಮಾರ್ಥಿಕ ಬದುಕನ್ನು ಸುಂದರಗೊಳಿಸುವ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಅನೇಕ ಹೊಸ ಹೊಳಹುಗಳಿಗೆ ಬಸವಾದಿ ಶರಣರ ಕಾಲ ಕಾರಣವಾಗಿದೆ ಎಂದು ನುಡಿದರು.