ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾಮಾಜಿಕ ಕ್ರಾಂತಿಯ ಹರಿಕಾರ, ವೈಚಾರಿಕ-ವೈಜ್ಞಾನಿಕ ಚಿಂತನೆಯುಳ್ಳ ವಿಶ್ವಗುರು ಬಸವಣ್ಣನವರ ಚಿಂತನೆ, ತತ್ವ, ಮೌಲ್ಯಗಳು, ವಚನಗಳ ಸಾರ-ಸಂಗ್ರಹ ಮನುಕುಲಕ್ಕೆ ದಾರಿದೀಪ ಮತ್ತು ಸಾಮಾಜಿಕ ಸಂಪತ್ತಾಗಿದೆ ಎಂದು ಸಾಹಿತಿ ಕೆ.ಎ. ಬಳಿಗೇರ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಸಹಸ್ರಾರ್ಜುನ ಬಿ.ಎಡ್ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ಶಾಲಾ-ಕಾಲೇಜಿಗೊಂದು ಶರಣ ತತ್ವ ಚಿಂತನೆ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಬಸವಣ್ಣನವರು ಸಮಾಜದಲ್ಲಿರುವ ಅಜ್ಞಾನ, ಅಂಧಕಾರ, ಮೂಢನಂಬಿಕೆಗಳನ್ನು ಹೊಡೆದೋಡಿಸಿ ಮನುಕುಲಕ್ಕೆ ದಾರಿದೀಪವಾಗಿದ್ದಾರೆ. ಜಗಜ್ಯೋತಿ ಬಸವಣ್ಣನವರ ತತ್ವ-ಸಿದ್ಧಾಂತಗಳನ್ನು ಎಲ್ಲರೂ ಓದಿ ಅರ್ಥೈಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ-ಸುಲಲಿತ ಬದುಕು ಪ್ರಾಪ್ತವಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಬೆಳಕು ಮೂಡಲು ಇಂದು ಬಸವಣ್ಣನವರ ಚಿಂತನೆ, ಸಂದೇಶ, ವಚನಗಳ ಅಧ್ಯಯನ ಅಗತ್ಯವಿದೆ. ಬಸವೇಶ್ವರರು ವಿಶ್ವ ಕಂಡ ಶ್ರೇಷ್ಠ ತತ್ವಜ್ಞಾನಿ, ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿಗೆ ಕಾರಣರಾದ ಅವರ ಜ್ಞಾನ ಭಂಡಾರದ ಬಗ್ಗೆ ವಿದೇಶಿಗರೂ ಆಕರ್ಷಿತರಾಗಿದ್ದು, ಭಾರತೀಯರು ಇತ್ತ ಚಿತ್ತ ಹರಿಸಬೇಕಾಗಿದೆ.
ಪ್ರಶಿಕ್ಷಣಾರ್ಥಿಗಳು ಈ ಬಗ್ಗೆ ಆಳವಾದ ಅಧ್ಯಯನ ಮಾಡಿ ಭವಿಷ್ಯದಲ್ಲಿ ಮಕ್ಕಳಲ್ಲಿ ಬಿತ್ತುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಶ.ಸಾ.ಪದಿಂದ ಜಿಲ್ಲೆಯಲ್ಲಿನ ಎಲ್ಲ ಡಿ.ಎಡ್/ಬಿ.ಎಡ್ ಕಾಲೇಜುಗಳಲ್ಲಿ ಶರಣ ತತ್ವ ಚಿಂತೆನ ಕಾರ್ಯಕ್ರಮ ನಡೆಸಲಾಗುವುದು. ಅಲ್ಲದೇ `ಮನೆ ಮನದಂಗಳದಿ ವಚನ ರಥ ಶರಣರ ಪಥ’ ಕಾರ್ಯಕ್ರಮ ಆರಂಭಿಸಿದ್ದೇವೆ ಎಂದರು.
ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ಕನ್ನಡ ಸಾರಸ್ವತ ಲೋಕಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ-ಅಗ್ರಗಣ್ಯವಾಗಿದೆ. ಶರಣರ ಮೇಲೆ ನಡೆದಂತೆ ಅವರ ವಚನ ಸಾಹಿತ್ಯದ ಮೇಲೆ ಈಗಲೂ ದಬ್ಬಾಳಿಕೆ ನಡೆದಿದೆ. ಹೀಗಾಗಿ ವಚನ ಸಾಹಿತ್ಯದ ಪ್ರಚಾರ ಮತ್ತು ಉಳಿವಿಗಾಗಿ ಈಗಲೂ ಹೋರಾಟ ನಡೆದಿರುವುದು ವಿಷಾದನೀಯ ಎಂದರು.
ಪ್ರೊ. ಸೋಮಶೇಖರ ಕೆರಿಮನಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ, ಕದಳಿ ವೇದಿಕೆಯ ತಾಲೂಕಾಧ್ಯಕ್ಷೆ ನಿರ್ಮಲಾ ಅರಳಿ, ಬೂದಪ್ಪ ಅಂಗಡಿ, ಕೆ.ಆರ್. ನಿಂಬಣ್ಣವರ, ಎಂ.ಕೆ. ಕಳ್ಳಿಮಠ, ನಾಗರಾಜ ಮಜ್ಜಿಗುಡ್ಡದ ಸೇರಿ ಉಪನ್ಯಾಸಕ ವರ್ಗ, ಪ್ರಶಿಕ್ಷಣಾರ್ಥಿಗಳು ಇದ್ದರು. ಪ್ರಭಾವತಿ ಕೊಡ್ಲಿವಾಡ, ಬಿ.ಎಂ. ದ್ಯಾವಣ್ಣವರ, ಎಂ.ಆಯ್. ಮಾಗಳದ ನಿರೂಪಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಆರ್.ಎಂ. ಅಂಗಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಜನರಾಡುವ ಸಾಮಾನ್ಯ ಭಾಷೆಯ ವಚನ ಸಾಹಿತ್ಯದ ಮೂಲಕ ಸಂವಿಧಾನದ ಆಶಯಗಳನ್ನು ಮೂಡಿಸುವ ಕೆಲಸ ಮಾಡಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶರಣರ ತತ್ವ ಚಿಂತನೆಗಳನ್ನು ತಿಳಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶ.ಸಾ.ಪ ಕಾರ್ಯ ಶ್ಲಾಘನೀಯ ಎಂದರು.