ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರರ ತತ್ವ-ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಸಚಿವ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಗದಗ ನಗರದ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಶಾಂತಿ ಭಂಗವಾಗುತ್ತಿರುವುದನ್ನು ಉದಾಹರಿಸಿದ ಸಚಿವರು, ಕರ್ನಾಟಕದಲ್ಲಿ ಶಾಂತಿಯುತ ಜೀವನ ಸಾಧ್ಯವಾಗಿರುವುದು ಬಸವ ತತ್ವಗಳ ಪ್ರಭಾವವೆಂದು ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು (ಶಿರೊಳ ತೋಂಟದಾರ್ಯ ಮಠ ಮತ್ತು ಬೈರನಹಟ್ಟಿ ವಿರಕ್ತಮಠ) ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣನವರು ಮನುಷ್ಯ-ಮನುಷ್ಯರ ನಡುವೆ ಸಮಾನತೆಯ ದೃಷ್ಟಿಕೋನ ಹೊಂದಿ, ಸಮಾಜದಲ್ಲಿ ಸಮಾನತೆಯ ಜಾಗೃತಿ ಮೂಡಿಸಿದ್ದಾರೆ ಎಂದರು.
`ಬಸವ ಬೇಳಕು’ ಎಂಬ ಕವನ ಸಂಕಲನ ರೂಪದ ಬಸವಣ್ಣನವರ ಕುರಿತ ಕಿರು ಪುಸ್ತಕವನ್ನು ಸಚಿವ ಎಚ್.ಕೆ. ಪಾಟೀಲ ಮತ್ತು ಉಪಸ್ಥಿತರಿದ್ದ ಗಣ್ಯರು ಬಿಡುಗಡೆ ಮಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಕೃಷ್ಣಾ ಪರಾಪುರ, ಎಸ್.ಎಸ್. ಪಟ್ಟಣಶೆಟ್ಟರ್, ಬಾಲಚಂದ್ರ ಭರಮಗೌಡ್ರ, ನಾಗೇಶ್ ಸವಡಿ, ಎಸ್.ಎನ್. ಬಳ್ಳಾರಿ, ಜೋಗಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಎಸಿ ಗಂಗಪ್ಪ ಎಂ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರೂಪಿಸಿದರು.
ಶರಣ ತತ್ವ ಚಿಂತಕ ಜಿ.ಎಸ್. ಪಾಟೀಲ ವಿಶೇಷ ಉಪನ್ಯಾಸ ನೀಡುತ್ತಾ, 12ನೇ ಶತಮಾನದಲ್ಲಿ ಬಸವಣ್ಣನವರು ಲಿಂಗ, ಆರ್ಥಿಕ, ಧಾರ್ಮಿಕ ಅಸಮಾನತೆಗಳ ವಿರುದ್ಧ ಹೋರಾಡಿದರು. ಅವರ ತತ್ವಗಳನ್ನು ಸಾಮಾನ್ಯರಿಗೆ ತಲುಪಿಸುವಲ್ಲಿ ನಾವು ಇನ್ನೂ ಹೆಚ್ಚು ಪ್ರಯತ್ನಶೀಲರಾಗಬೇಕು ಎಂದು ಕರೆ ನೀಡಿದರಲ್ಲದೆ, ಅಲ್ಲಮಪ್ರಭುದೇವರು ಶರಣ ಪರಂಪರೆಯ ನಾನಾ ವಿಧಗಳನ್ನು ಒಗ್ಗೂಡಿಸಿದ ಮಹಾಪುರುಷರಾಗಿ, 16ನೇ ಶತಮಾನದಲ್ಲಿ ಯಡಿಯೂರಿನ ಶ್ರೀಗಳು ಶರಣ ಚಳವಳಿಗೆ ನಾಂದಿ ಹಾಡುವ ಮೂಲಕ ಮುಂಚೂಣಿಯಲ್ಲಿದ್ದರು ಎಂದರು.
“ಬಸವಣ್ಣನವರು ಶೋಷಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶ್ರೇಣೀಕೃತ ವ್ಯವಸ್ಥೆಯನ್ನು ವಿರೋಧಿಸಿದರು. ಅವರ ಆಲೋಚನೆ ಮತ್ತು ಹೋರಾಟಗಳು ಸಮಾಜ ಸುಧಾರಣೆಗೆ ದಾರಿದೀಪವಾಗಿವೆ. ಬಸವಣ್ಣನವರ ತತ್ವ ಹಾಗೂ ಭಾರತೀಯ ಸಂವಿಧಾನದ ಆಶಯ ಒಂದೇ ಆಗಿದ್ದು, ಇದನ್ನು ನಾವು-ನೀವೆಲ್ಲರೂ ಅರಿಯಬೇಕಾಗಿದೆ”
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.