ಬೆಂಗಳೂರು: ತುಂಗಭದ್ರಾ ಅಣೆಕಟ್ಟಿನ ಗೇಟ್ ಅನ್ನು ಕಾರ್ಮಿಕರ, ಇಂಜಿನಿಯರ್ ಗಳ, ಅಧಿಕಾರಿಗಳ ಶ್ರಮದಿಂದ ದುರಸ್ತಿ ಮಾಡಲಾಗಿದೆ. ಅಣೆಕಟ್ಟು ತುಂಬಿದ ತಕ್ಷಣ ನಾನು ಮತ್ತು ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವ ಕೆಲಸ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡ ಪ್ರತಿಯೊಬ್ಬ ಕಾರ್ಮಿಕರನ್ನು ಗೌರವಿಸುವ ಕೆಲಸ ಸರ್ಕಾರ ಮಾಡಲಿದೆ.
ಇಡೀ ದೇಶವೇ ಏನಾಗಬಹುದು ಎಂದು ಕಾತರದಿಂದ ನೋಡುತ್ತಿತ್ತು. ನಾವು ಇದರಲ್ಲಿ ಯಶಸ್ಸು ಕಂಡಿದ್ದೇವೆ. ವಿರೋಧ ಪಕ್ಷಗಳು ಈ ವಿಷಯದ ಬಗ್ಗೆ ಟೀಕೆ ಮಾಡುತ್ತಿದ್ದವು. ಆಗ ನಾವೇನು ಮಾತನಾಡಲಿಲ್ಲ. ನಾವು ಕೆಲಸ ಮಾಡಿ ಸಾಧಿಸಿದ್ದೇವೆ. ಟೀಕೆಗಳು ಸಾಯುತ್ತವೆ. ಅದಕ್ಕೆ ಕೆಲಸಗಳು ಉಳಿಯುತ್ತವೆ ಎಂದು ಹೇಳುತ್ತಿರುತ್ತೇನೆ ಎಂದು ಹೇಳಿದರು.



