ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಅತ್ಯಾಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಿಂದಲೇ ಆಂಗ್ಲ ಬೌಲರ್ಗಳನ್ನು ದಂಡಿಸುತ್ತಾ ಸಾಗಿದ ಶುಭ್ಮನ್ 95 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಒಂದೇ ಮೈದಾನದಲ್ಲಿ ಮೂರು ಸ್ವರೂಪಗಳಲ್ಲೂ ಸೆಂಚುರಿ ಸಿಡಿಸಿದ ಭಾರತದ ಮೊದಲ ಬ್ಯಾಟರ್ ಹಾಗೂ ವಿಶ್ವದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾದರು.
ಶುಭ್ಮನ್ ಗಿಲ್ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೂರು ಸ್ವರೂಪಗಳಲ್ಲೂ ಶತಕ ಸಿಡಿಸಿದ್ದಾರೆ. 2023 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ್ದ ಗಿಲ್, ಅದೇ ವರ್ಷ ಆಸ್ಟ್ರೇಲಿಯಾ ವಿರುದ್ಧ ಇದೇ ಮೈದಾನದಲ್ಲಿ ಟೆಸ್ಟ್ ಸೆಂಚುರಿ ಸಿಡಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ.
ಈ ಮೂಲಕ ಒಂದೇ ಮೈದಾನದಲ್ಲಿ ಮೂರು ಸ್ವರೂಪಗಳಲ್ಲೂ ಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಶುಭ್ಮನ್ ಗಿಲ್ ತಮ್ಮದಾಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಗಿಲ್ ಇದೇ ಮೈದಾನದಲ್ಲಿ ಐಪಿಎಲ್ನಲ್ಲೂ ಮೂರು ಸೆಂಚುರಿಗಳನ್ನು ಸಿಡಿಸಿದ್ದಾರೆ.