‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆಗೂ ಮೊದಲುವೇ ಶಾಕ್ ಸಿಕ್ಕಿದೆ. ಜನವರಿ 17 ಹಾಗೂ 18ರಂದು ಎರಡು ದಿನ ನಡೆಯಬೇಕಿದ್ದ ಫಿನಾಲೆ, ಈಗ ಕೇವಲ ಭಾನುವಾರಕ್ಕೆ ಸೀಮಿತವಾಗಿದೆ. ಕಾರಣ – ನಿರೂಪಕ ಕಿಚ್ಚಾ ಸುದೀಪ್ ಇಂದು ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಾಗಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ ಶುರುವಾಗಿದೆ.
ಸುದೀಪ್ ಅವರು ಕೆಲ ಸಂದರ್ಭಗಳಲ್ಲಿ ಎಪಿಸೋಡ್ ಮಿಸ್ ಮಾಡಿಕೊಂಡಿದ್ದರು. ಆದರೆ, ಫಿನಾಲೆ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಇದೇ ಮೊದಲ ಬಾರಿ. ಇದರೊಂದಿಗೆ ಎರಡು ದಿನಗಳ ಫಿನಾಲೆ ಸಂಪ್ರದಾಯಕ್ಕೂ ಈ ಬಾರಿ ಬ್ರೇಕ್ ಬಿದ್ದಿದೆ.
ಈ ಹಿಂದೆ ಸುದೀಪ್ ಗೈರುಗೊಳ್ಳಲು ಕಾರಣ ಸಿಸಿಎಲ್ ಬ್ಯುಸಿ ಶೆಡ್ಯೂಲ್. ಜನವರಿ 16ರಂದು ವಿಶಾಖಪಟ್ಟಣದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ‘ಪಂಜಾಬ್ ದೆ ಶೇರ್’ ವಿರುದ್ಧ ಗೆಲುವು ದಾಖಲಿಸಿದೆ. ಪಂದ್ಯ ಮುಗಿಸಿ ರಾತ್ರಿ ಪ್ರಯಾಣ ಮಾಡಿ ಬೆಳಿಗ್ಗೆ ಶೂಟಿಂಗ್ ನಡೆಸುವುದು ಅಸಾಧ್ಯವಾಗಿದ್ದರಿಂದ, ಸುದೀಪ್ ಒಂದು ದಿನ ಬಿಡುವು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇಂದು ಫಿನಾಲೆ ಬದಲಾಗಿ ಸಾಮಾನ್ಯ ಎಪಿಸೋಡ್ ಪ್ರಸಾರವಾಗಲಿದ್ದು, ವಿಶೇಷ ಡ್ಯಾನ್ಸ್ ಪರ್ಫಾರ್ಮನ್ಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಭಾನುವಾರ ಬೆಳಿಗ್ಗೆ 10 ಗಂಟೆವರೆಗೆ ವೋಟಿಂಗ್ ಅವಕಾಶ ಇರಲಿದ್ದು, ಆ ಬಳಿಕ ಫಿನಾಲೆ ಎಪಿಸೋಡ್ನಲ್ಲಿ ಆರು ಫೈನಲಿಸ್ಟ್ಗಳ ಪೈಕಿ ನಾಲ್ವರು ಎಲಿಮಿನೇಟ್, ಒಬ್ಬ ವಿನ್ನರ್ ಹಾಗೂ ರನ್ನರ್ಅಪ್ ಘೋಷಣೆ ನಡೆಯಲಿದೆ. ಫಿನಾಲೆ ಎಪಿಸೋಡ್ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.



