ಬಿಗ್ ಬಾಸ್ ಕಪ್ ಕೈಯಲ್ಲಿ ಹಿಡಿದು ಹುಟ್ಟೂರಿನ ರಸ್ತೆಯಲ್ಲಿ ಗಿಲ್ಲಿ ನಟ ಸಾಗಿದ ದೃಶ್ಯ, ಅಭಿಮಾನಿಗಳಿಗೆ ಕಣ್ಣೀರು ತರಿಸುವಂತಹ ಕ್ಷಣವಾಗಿ ಮೂಡಿಬಂದಿದೆ.
ಒಂದು ಕಾಲದಲ್ಲಿ ಸರ್ಕಾರಿ ಬಸ್ ಪಾಸ್ ಹಿಡಿದು ಓಡಾಡುತ್ತಿದ್ದ ಹುಡುಗ, ಇಂದು ಅದೇ ರಸ್ತೆಯಲ್ಲಿ ಟ್ರೋಫಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದಾನೆ. ಈ ದೃಶ್ಯವೇ ಗಿಲ್ಲಿ ಜೀವನದ ದೊಡ್ಡ ಸಿಂಬಲ್ ಆಗಿದೆ.
ಜನರ ಮಧ್ಯೆ ಮಾತನಾಡಿದ ಗಿಲ್ಲಿ ನಟ, “ನಾನು ಕೆ.ಎಂ. ದೊಡ್ಡಿಯಲ್ಲಿ ಐಟಿಐ ಓದಿದ್ದೆ. ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಇವತ್ತು ಇದೇ ಊರಲ್ಲಿ ಕಪ್ ಹಿಡಿದು ಜನರ ಮಧ್ಯೆ ನಿಂತಿದ್ದೀನಿ ಅಂದ್ರೆ, ಅದು ಜನರ ಪ್ರೀತಿಯ ಫಲ” ಎಂದರು.
ಪ್ರೀತಿ ಮಾತ್ರವಲ್ಲ, ಭಯವೂ ಇದೆ
ಗಿಲ್ಲಿ ನಟನ ಮಾತಿನಲ್ಲಿ ಪ್ರಾಮಾಣಿಕತೆ ಸ್ಪಷ್ಟವಾಗಿ ಕಾಣಿಸಿಕೊಂಡಿತು. “ಜನರ ಪ್ರೀತಿ ಹೆಚ್ಚಾದಷ್ಟು ಜವಾಬ್ದಾರಿ ಹೆಚ್ಚಾಗುತ್ತದೆ. ಖುಷಿಗಿಂತ ಭಯ ಜಾಸ್ತಿ ಆಗಿದೆ. ಈ ಪ್ರೀತಿಗೆ ನ್ಯಾಯ ಕೊಡಬೇಕೆಂಬ ಒತ್ತಡ ಯಾವಾಗಲೂ ಇರುತ್ತದೆ” ಎಂದು ಹೇಳಿದ್ದಾರೆ.
ಅಂಬರೀಷ್ ಹೆಸರು ಕೇಳಿದಾಗ ತಲೆಬಾಗಿದ ಗಿಲ್ಲಿ
ದೊಡ್ಡಅರಸಿನ ಕೆರೆ ಗೇಟ್ ಬಳಿ ಅಭಿಮಾನಿಗಳು ಗಿಲ್ಲಿಯನ್ನು ಅಂಬರೀಷ್ ಅವರ ಜೊತೆ ಹೋಲಿಕೆ ಮಾಡಿದಾಗ, ಗಿಲ್ಲಿ ನಟ ತಕ್ಷಣವೇ ವಿನಯದಿಂದ ಪ್ರತಿಕ್ರಿಯಿಸಿದರು.
“ಅಂಬರೀಷಣ್ಣನ ಕಾಲಿನ ಧೂಳಿಗೂ ನಾನು ಸಮನಲ್ಲ. ಅವರ ಮಟ್ಟಕ್ಕೆ ನಮ್ಮನ್ನು ಹೋಲಿಸಬೇಡಿ. ಅವರ ಊರಿನ ಪಕ್ಕ ನಮ್ಮ ಊರು ಇರೋದೇ ಭಾಗ್ಯ” ಎಂದು ಹೇಳಿದರು.
ಜಗ್ಗೇಶ್ ಮಾತು ನಿಜವಾದ ಕ್ಷಣ
ನಟ ಜಗ್ಗೇಶ್ ನೀಡಿದ್ದ ಭವಿಷ್ಯ ಇದೀಗ ನಿಜವಾಗಿದೆ. ಇಂದು ಗಿಲ್ಲಿ ನಟ ಪೊಲೀಸ್ ಭದ್ರತೆಯಲ್ಲಿ ಸಂಚರಿಸುತ್ತಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಗಿಲ್ಲಿ, “ಜಗ್ಗೇಶ್ ಅವರ ಆಶೀರ್ವಾದದಿಂದಲೇ ಇದು ಸಾಧ್ಯವಾಗಿದೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.



