ವಿಜಯಸಾಕ್ಷಿ ಸುದ್ದಿ, ಗದಗ : ಶರಣರ ಮೂಲ ಆದರ್ಶಗಳನ್ನು ಮರೆಮಾಚದೆ, ವಚನಗಳ ಮೂಲ ಆಶಯದಂತೆ ಯಥಾವತ್ತಾಗಿ ಅರ್ಥೈಸಿಕೊಳ್ಳಬೇಕಾಗಿದೆ. ಅಜ್ಞಾನವನ್ನು ಕಳೆದು ಜ್ಞಾನವನ್ನು ಉಣಬಡಿಸುವ ಸಾಹಿತ್ಯವೇ ವಚನ ದರ್ಶನ. ಅಹಂಕಾರವನ್ನು ಅಳಿಸಿ, ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ವಚನ.
ವಚನಗಳ ಸಾರವನ್ನು ಅರಿತು ನಡೆಯಬೇಕಾಗಿದೆ. ವಚನ ಸಾಹಿತ್ಯವನ್ನು ಎಲ್ಲರಿಗೂ ಉಣಬಡಿಸುವುದರಿಂದ ಸಮ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಹುಬ್ಬಳ್ಳಿಯ ವಾಣಿಜ್ಯ ತೆರಿಗೆಗಳ ಇಲಾಖೆಯ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಅಭಿಪ್ರಾಯಪಟ್ಟರು.
ಇಲ್ಲಿನ ಬಯಲು ವೇದಿಕೆ, ಕೆ.ಎಲ್.ಇ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನಕದಾಸ ಶಿಕ್ಷಣ ಸಮಿತಿ ಇವುಗಳ ಸಹಯೋಗದಲ್ಲಿ `ವಚನ ದರ್ಶನ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಸಮಸಮಾಜದ ತಳಹದಿಯಲ್ಲಿ ಕಲ್ಯಾಣ ರಾಜ್ಯವನ್ನು ಕಟ್ಟಿದರು. ಭಕ್ತಿ ಪಂಥದ ಮುಖಾಂತರ ಜಾತಿ ತಾರತಮ್ಯವನ್ನು ಹೋಗಲಾಡಿಸಲು ಹಗಲಿರುಳು ಶ್ರಮಿಸಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಆಧ್ಯಾತ್ಮಿಕ ಕ್ರಾಂತಿಯನ್ನು ಮಾಡಿದರು. ವಚನಗಳ ಮೂಲಕ ಜ್ಞಾನವನ್ನು ಮತ್ತು ಭಕ್ತಿಯನ್ನು ಉಣಬಡಿಸಿದ ಮಹಾತ್ಮ ಬಸವಣ್ಣನವರು `ಕಾಯಕವೇ ಕೈಲಾಸ’ ಎಂದು ಹೇಳುವುದರ ಮೂಲಕ ಕಾಯಕ ಲೋಕವನ್ನೇ ಸೃಷ್ಟಿಸಿ ಕಾಯಕದ ಜೊತೆಗೆ ಭಕ್ತಿ ಮಾರ್ಗವನ್ನು ಸಮಾಜಕ್ಕೆ ತೋರಿದರು ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪ.ಪೂ. ಶ್ರೀ ಡಾ. ಕಲ್ಲಯ್ಯಜ್ಜನವರು ಮಾತನಾಡುತ್ತಾ, ಸಮಾಜದಲ್ಲಿನ ತಾರತಮ್ಯವನ್ನು ಹೊಗಲಾಡಿಸುವಲ್ಲಿ ವಚನಗಳ ಪಾತ್ರ ಬಹಳ ಮಹತ್ವದಾಗಿದೆ. ಬಸವಣ್ಣನವರು `ದಯವೇ ಧರ್ಮದ ಮೂಲ’ ಎಂದರು. ಅಂದರೆ ಪ್ರತಿಯೊಬ್ಬರಲ್ಲಿ ದಯೆಯನ್ನು ತೋರಬೇಕು, ಅದರೊಂದಿಗೆ ಪ್ರತಿಯೊಬ್ಬರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಾಗಿದೆ.
ವಚನಗಳು ಪ್ರತಿಯೊಬ್ಬರಿಗೂ ತಲುಪಲು ಸಾಹಿತಿಗಳು, ವಿದ್ವಾಂಸರು ಶ್ರಮಿಸಬೇಕಾಗಿದೆ ಎಂದರು.
ಜೆ.ಟಿ. ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಶಕುಂತಲಾ ಸಿಂಧೂರ ಹಾಗೂ ವಿ.ಡಿ.ಎಸ್.ಟಿ. ಪ.ಪೂ. ಕಾಲೇಜಿನ ಪ್ರಾಚಾರ್ಯ ಮಾರುತಿ ಸಿ.ಕಟ್ಟಿಮನಿ `ವಚನ ದರ್ಶನ’ ಪುಸ್ತಕದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕನಕದಾಸ ಶಿಕ್ಷಣ ಸಮಿತಿಯ ಜಂಟಿ ಕಾರ್ಯದರ್ಶಿಗಳಾದ ಡಾ.ಪುನಿತ ಕುಮಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕನಕದಾಸ ಶಿಕ್ಷಣ ಸಮಿತಿ, ಕಾರ್ಯದರ್ಶಿಗಳಾದ ರವೀಂದ್ರನಾಥ ಬಿ.ದಂಡಿನ, ಉಮೇಶ ಹೀರೆಮಠ, ಡಾ. ಜಿ.ಸಿ. ಜಂಪಣ್ಣವರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಬಯಲು ಸಂಯೋಜಕ ನಿಂಗಪ್ಪ ಪೂಜಾರ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕೆಎಲ್‌ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ವೀಣಾ ನಿರೂಪಿಸಿದರು. ಬಯಲು ಸಹ ಸಂಯೋಜಕರಾದ ಹರ್ಷಾ ನಿಲೂಗಲ್ ವಂದಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಸುಧೀರ ಘೋರ್ಪಡೆ, ಸಾಮಾಜಿಕ ಹೋರಾಟಗಾರ ರವಿಕಾಂತ ಅಂಗಡಿ, ಕ.ಸಾ.ಪ ತಾಲೂಕಾಧ್ಯಕ್ಷರಾದ ಡಾ.ರಶ್ಮಿ ಅಂಗಡಿ ಹಾಗೂ ಸಾಹಿತಿಗಳು, ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾಲೇಜಿನ ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಸವಣ್ಣ ಮತ್ತು ಶರಣರ ಮೂಲ ಆದರ್ಶಗಳನ್ನು ಮರೆಮಾಚದೆ ಮೂಲ ವಚನಗಳ ಆಧಾರದ ಮೇಲೆ ಶರಣರು ಮತ್ತು ಬಸವಣ್ಣನ ನೈಜ ಅದರ್ಶಗಳ ಅಧ್ಯಯನಕ್ಕೆ ಹೆಚ್ಚು ಒತ್ತುಕೊಡಬೇಕಾಗಿದೆ. ಇಂದಿನ ಪೀಳಿಗೆಗೆ ವಚನ ಸಾಹಿತ್ಯ ಸಾರವನ್ನು ತಿಳಿಸಬೇಕಾಗಿದೆ. ಸಂಸ್ಕಾರ, ಸಂಸ್ಕೃತಿಯ ಉಳಿವಿಗಾಗಿ ಶರಣರ ವಚನಗಳನ್ನು ಉಣಬಡಿಸುವುದರ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.
– ಗೋವಿಂದಪ್ಪ ಗೌಡಪ್ಪಗೋಳ.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತರು.