ವಿಜಯಸಾಕ್ಷಿ ಸುದ್ದಿ, ಗದಗ: ಆದರ್ಶ ಶಿಕ್ಷಣ ಸಮಿತಿಯ ಶ್ರೀ ಲಕ್ಷ್ಮಣರಾವ್ ಅನಂತರಾವ್ ಪೋತ್ನೀಸ್ ಸ್ಮಾರಕ ಬಿಬಿಎ ಕಾಲೇಜಿನ ರಜತ ಮಹೋತ್ಸವ, ಹಳೆಯ ವಿದ್ಯಾರ್ಥಿಗಳ ಸಮ್ಮೇಳನ, ಸ್ಥಾಪಕ ಅಧ್ಯಕ್ಷರಾದ ವಿ.ಆರ್. ಕುಷ್ಟಗಿ ಅವರ ಜನ್ಮಶತಮಾನೋತ್ಸವ ಹಾಗೂ ಬಿಸಿಎ ಕಾಲೇಜಿನ ನಾಮಕರಣ ಸಮಾರಂಭವನ್ನು ಎಪ್ರಿಲ್ 19 ಮತ್ತು 20ರಂದು ಆಯೋಜಿಸಲಾಗಿದೆ ಎಂದು ಸಮಿತಿಯ ಚೇರಮನ್ ಆನಂದ ಪೋತ್ನೀಸ್ ಹೇಳಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಲೇಜಿನ ಗೋಲ್ಡನ್ ಜುಬ್ಲಿ ಹಾಲ್‌ನಲ್ಲಿ ಎ.19ರ ಸಂಜೆ 4 ಗಂಟೆಗೆ ಹಳೆಯ ವಿದ್ಯಾರ್ಥಿಗಳ ಸಭೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಉದ್ಘಾಟಿಸಲಿದ್ದಾರೆ. ವಿ ಡಿಜಿಟೈಸ್ ಯು ಸಂಸ್ಥಾಪಕ ಸುನೀಲ ಶಿಂಧೆ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಎ. 20ರಂದು ಬೆಳಿಗ್ಗೆ 10 ಗಂಟೆಗೆ ಬಿಬಿಎ ಕಾಲೇಜಿನ ರಜತ ಮಹೋತ್ಸವದ ಸಮಾರಂಭವನ್ನು ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಲಿದ್ದಾರೆ. ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ರಘು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿ ಸುಜಯ ಹುಬ್ಬಳ್ಳಿ ಮಾತನಾಡಿ, ಆದರ್ಶ ಶಿಕ್ಷಣ ಸಮಿತಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದೆ. ಹೀಗಾಗಿ ಹಳೆ ವಿದ್ಯಾರ್ಥಿಗಳು ಒಟ್ಟಾಗಿ ದೇಣಿಗೆ ಸಂಗ್ರಹಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಿ.ಜಿ. ಕುಷ್ಟಗಿ, ಪ್ರಾಚಾರ್ಯ ಲಿಂಗರಾಜ ರೇಷ್ಮಿ, ಬಾಹುಬಲಿ ಜೈನರ್ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯ ಕಾರ್ಯದರ್ಶಿ ಎ.ಡಿ. ಗೊಡಖಿಂಡಿ ಮಾತನಾಡಿ, ರಜತ ಮಹೋತ್ಸವ ಸಂದರ್ಭದಲ್ಲಿ ಆದರ್ಶ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ವಿ.ಆರ್. ಕುಷ್ಟಗಿ ಅವರ ಜನ್ಮಶತಮಾನೋತ್ಸವ ಹಾಗೂ ಬಿಸಿಎ ಕಾಲೇಜಿಗೆ ಶ್ರೀ ಡಿ.ಬಿ. ಗೋಡಖಿಂಡಿ ಸ್ಮಾರಕ ಬಿಸಿಎ ಕಾಲೇಜ್ ಎಂದು ನಾಮಕರಣ ಮಾಡಲಾಗುತ್ತಿದೆ. ಗೋಡಖಿಂಡಿ ಪರಿವಾರದ ಮೂವರು ಸಹೋದರರು ಒಟ್ಟಾಗಿ 11 ಲಕ್ಷ ರೂ. ದೇಣಿಗೆ ನೀಡಿದ್ದಾರೆ ಎಂದರು.