2024-25ರ ವಾರ್ಷಿಕ ಆಟಗಾರರ ಒಪ್ಪಂದದ ಪಟ್ಟಿಯನ್ನು ಇಂದು BCCI ಬಿಡುಗಡೆ ಮಾಡಿದೆ. ಈ ಬಾರಿಯೂ ಬಿಸಿಸಿಐ ನಾಲ್ವರು ಆಟಗಾರರಿಗೆ ಎ+ ಗ್ರೇಡ್‌ನಲ್ಲಿ ಅವಕಾಶ ನೀಡಿದ್ದು, ಆ ನಾಲ್ವರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಸೇರಿದ್ದಾರೆ. ಆದಾಗ್ಯೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಗ್ರೇಡ್‌ನಲ್ಲಿ ಸ್ಥಾನ ಪಡೆದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಏಕೆಂದರೆ ಈ ಇಬ್ಬರು ಆಟಗಾರರು ಈಗ ಕೇವಲ 2 ಮಾದರಿಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಆದಾಗ್ಯೂ ಈ ಇಬ್ಬರಿಗೆ ಎ+ ಗ್ರೇಡ್ ಸಿಕ್ಕಿದೆ. ಅದರಲ್ಲೂ ರೋಹಿತ್ ಶರ್ಮಾಗೆ ಈ ಗ್ರೇಡ್‌ನಲ್ಲಿ ಸ್ಥಾನ ಸಿಕ್ಕಿರುವುದು ಹಲವಾರು ಅನುಮಾನಗಳಿಗೆ ತೆರೆ ಎಳೆದಿದೆ. ಇದೀಗ ರೋಹಿತ್ ಶರ್ಮಾಗೆ ಎ+ ಗ್ರೇಡ್ ನೀಡುವುದರೊಂದಿಗೆ ಅವರ ನಿವೃತ್ತಿಯ ಊಹಾಪೋಹಗಳಿಗೂ ಅಂತ್ಯ ಸಿಕ್ಕಿದೆ.
ವಾಸ್ತವವಾಗಿ ಕಳೆದ ವರ್ಷ ಟೆಸ್ಟ್ ಮಾದರಿಯಲ್ಲಿ ರೋಹಿತ್ ಶರ್ಮಾ ಅವರ ಪ್ರದರ್ಶನ ವಿಶೇಷವಾಗಿರಲಿಲ್ಲ. ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ರೋಹಿತ್, ಇತ್ತ ತಮ್ಮ ನಾಯಕತ್ವವದಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿರಲಿಲ್ಲ. ಪರಿಸ್ಥಿತಿ ಹೇಗಿತ್ತೆಂದರೆ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್‌ನ ಆಡುವ ಹನ್ನೊಂದರ ಬಳಗದಿಂದಲೂ ರೋಹಿತ್ ಹೊರಗುಳಿದ್ದಿದ್ದರು. ಇದಾದ ನಂತರ, ರೋಹಿತ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಬಹುದು ಎಂಬ ಊಹಾಪೋಹಗಳು ಹುಟ್ಟಿಕೊಂಡಿದ್ದವು.
ಆದರೆ ಈಗ ಬಿಸಿಸಿಐ ಬಿಡುಗಡೆ ಮಾಡಿದ ಕೇಂದ್ರ ಒಪ್ಪಂದದಿಂದ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿಲ್ಲ ಎಂಬುದು ಸಾಭೀತಾದಂತ್ತಾಗಿದೆ. ಜೂನ್‌ನಲ್ಲಿ ಟೀಂ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ರೋಹಿತ್ ತಂಡದ ನಾಯಕತ್ವ ವಹಿಸಿಕೊಳ್ಳುವ ನಿರೀಕ್ಷೆಯಿದೆ.