ನವದೆಹಲಿ: ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ 2026ರ ಅಂಡರ್-19 ವಿಶ್ವಕಪ್‌ನ್ನು ಗೆದ್ದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 7.5 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ.
ಭಾರತದ ಅಂಡರ್-19 ತಂಡದ ಸಾಧನೆಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹರ್ಷ ವ್ಯಕ್ತಪಡಿಸಿದ್ದು, ಯುವ ಆಟಗಾರರ ಅಸಾಧಾರಣ ಪ್ರದರ್ಶನವನ್ನು ಮೆಚ್ಚಿ ಈ ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
“2026ರ ಅಂಡರ್-19 ವಿಶ್ವಕಪ್‌ನ್ನು ಗೆದ್ದ ಭಾರತದ ತಂಡದ ಬಗ್ಗೆ ಇಡೀ ದೇಶ ಹಾಗೂ ಬಿಸಿಸಿಐಗೆ ಅಪಾರ ಹೆಮ್ಮೆ ಇದೆ. ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ರೀತಿ ಹಾಗೂ ಪಂದ್ಯಾವಳಿಯುದ್ದಕ್ಕೂ ಅಜೇಯವಾಗಿ ಫೈನಲ್ ತಲುಪಿ ಪ್ರಶಸ್ತಿ ಗೆದ್ದಿರುವುದು ಅತ್ಯಂತ ಪ್ರಶಂಸನೀಯವಾಗಿದೆ. ಈ ಸಾಧನೆಯನ್ನು ಗೌರವಿಸುವ ಸಲುವಾಗಿ ತಂಡಕ್ಕೆ 7.5 ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ” ಎಂದು ದೇವಜಿತ್ ಸೈಕಿಯಾ ತಿಳಿಸಿದ್ದಾರೆ.



