ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್‌ಗೆ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡಿರುವುದಕ್ಕೆ ಭಾರತದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿರುವ ನಡುವೆಯೇ, ಬಿಸಿಸಿಐ (BCCI) ಅಚ್ಚರಿಯ ನಿರ್ಧಾರವೊಂದನ್ನು ಕೈಗೊಂಡಿದೆ. ಭಾರತ ತಂಡವು ಏಕದಿನ ಹಾಗೂ ಟಿ20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ.
ಈ ಪ್ರವಾಸದ ಸಂಪೂರ್ಣ ವೇಳಾಪಟ್ಟಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಇಂದು ಅಧಿಕೃತವಾಗಿ ಪ್ರಕಟಿಸಿದೆ. ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಹಿಂಸಾಚಾರ ಹಿನ್ನೆಲೆಯಲ್ಲಿ ಈ ಪ್ರವಾಸವನ್ನು ಬಿಸಿಸಿಐ ಮುಂದೂಡಿತ್ತು. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿರುವುದನ್ನು ಗಮನಿಸಿ ಪ್ರವಾಸಕ್ಕೆ ಮರುಅನುಮೋದನೆ ನೀಡಲಾಗಿದೆ.
ವೇಳಾಪಟ್ಟಿಯ ಪ್ರಕಾರ, ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸ ಏಕದಿನ ಸರಣಿಯೊಂದಿಗೆ ಆರಂಭವಾಗಿ ಟಿ20 ಸರಣಿಯೊಂದಿಗೆ ಅಂತ್ಯಗೊಳ್ಳಲಿದೆ. ಉಭಯ ತಂಡಗಳು ಸೆಪ್ಟೆಂಬರ್ ತಿಂಗಳಲ್ಲಿ ಮುಖಾಮುಖಿಯಾಗಲಿವೆ.
ಸರಣಿ ವೇಳಾಪಟ್ಟಿ
ಏಕದಿನ ಸರಣಿ:
▪️ ಮೊದಲ ಪಂದ್ಯ – ಸೆಪ್ಟೆಂಬರ್ 1
▪️ ಎರಡನೇ ಪಂದ್ಯ – ಸೆಪ್ಟೆಂಬರ್ 3
▪️ ಮೂರನೇ ಪಂದ್ಯ – ಸೆಪ್ಟೆಂಬರ್ 6
ಟಿ20 ಸರಣಿ:
▪️ ಮೊದಲ ಪಂದ್ಯ – ಸೆಪ್ಟೆಂಬರ್ 9
▪️ ಎರಡನೇ ಪಂದ್ಯ – ಸೆಪ್ಟೆಂಬರ್ 12
▪️ ಮೂರನೇ ಪಂದ್ಯ – ಸೆಪ್ಟೆಂಬರ್ 13
ಭಾರತ ತಂಡವು ಕೊನೆಯ ಬಾರಿ 2022–23ರಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡಿತ್ತು. ಆ ವೇಳೆ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಸೋಲು ಅನುಭವಿಸಿತ್ತು. ಆದರೂ, ಬಾಂಗ್ಲಾದೇಶ ನೆಲದಲ್ಲಿ ಭಾರತ ಉತ್ತಮ ದಾಖಲೆಯನ್ನು ಹೊಂದಿದ್ದು, 25 ಪಂದ್ಯಗಳಲ್ಲಿ 18 ಗೆಲುವು ಸಾಧಿಸಿದೆ.



