ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಈಗ ತರಬೇತಿ ಹಂತದಲ್ಲಿರುವ ನೀವು ಮುಂಬರುವ ದಿನಗಳಲ್ಲಿ ಉತ್ತಮ ಶಿಕ್ಷಕರಾಗಿ ಈ ಸಮಾಜಕ್ಕೆ ಆಸ್ತಿಯಾಗಿ ಎಂದು ಕೋಟುಮಚಗಿಯ ಶ್ರೀ ಸೋಮೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಟಿ.ಜಿ. ಕಂಬಾಳಿಮಠ ಹೇಳಿದರು.
ಸಮೀಪದ ಕೋಟುಮಚಗಿಯ ಶ್ರೀ ಸೋಮೇಶ್ವರ ಪ್ರೌಢಶಾಲೆಯಲ್ಲಿ ನಡೆದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಳೆದ ಮೂರು ತಿಂಗಳಿನಿಂದ ನಮ್ಮ ಪ್ರೌಢಶಾಲೆಯಲ್ಲಿ ಪ್ರಶಿಕ್ಷಣ ತರಬೇತಿಯನ್ನು ಸಮರ್ಪಕವಾಗಿ ಪೂರೈಸಿದ್ದೀರಿ. ನಿಮ್ಮ ಈ ತರಬೇತಿಯು ಮುಕ್ತಾಯದ ಹಂತದಲ್ಲಿದೆ. ನಿಮ್ಮ ಪರೀಕ್ಷೆಗಳು ಮುಗಿದರೆ ಮುಂದೆ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು, ಟಿಇಟಿ ಪರೀಕ್ಷೆಗೆ ಅರ್ಹರಾಗುತ್ತೀರಿ. ನೀವು ಎಲ್ಲಿಯೇ ಕೆಲಸ ಮಾಡಿರಿ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಅಲ್ಲಿನ ಮಕ್ಕಳ ಪ್ರೀತಿ, ವಿಶ್ವಾಸ ಗಳಿಸಿ ಉತ್ತಮ ಶಿಕ್ಷಕರೆಂಬ ಹೆಸರು ಪಡೆಯಿರಿ ಎಂದರು.
ಶಿಕ್ಷಕಿ ವಿ.ಎಸ್. ಚಲವಾದಿ ಮಾತನಾಡಿ, ಪೂರ್ವ ಜನ್ಮದ ಪುಣ್ಯವಿದ್ದಾಗ ಮಾತ್ರ ಶಿಕ್ಷಕರಾಗುವ ಯೋಗ ದೊರಕುತ್ತದೆ. ಅಂತಹ ಪುಣ್ಯ ನಿಮಗೆ ಸಿಕ್ಕಿದೆ. ಈ ಪುಣ್ಯವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಸಮಾಜ ಗುರುತಿಸುವಂತಹ ಶಿಕ್ಷಕರಾಗಿ ನಿಮ್ಮ ಸೇವೆಯನ್ನು ಸಲ್ಲಿಸಿರಿ ಎಂದು ಹಾರೈಸಿದರು.
ಸಭೆಯನ್ನುದ್ದೇಶಿಸಿ ಶಿಕ್ಷಕ ಪಿ.ಎಚ್. ತಾಂಬೋಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾದ ಕಾವೇರಿ ಮ್ಯಾಗೇರಿ, ರಮೇಶ ಬಂಡಿಹಾಳ, ಬಸವರಾಜ ತಳಕಲ್ಲ ಮತ್ತು ಅನಿಲ ಮ್ಯಾಗೇರಿಯವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಪ್ರಶಿಕ್ಷಣಾರ್ಥಿಗಳು ಶಾಲೆಗೆ 25 ಲೋಟಗಳನ್ನು ಕಾಣಿಕೆಯಾಗಿ ನೀಡಿದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಲಾಗಿದ್ದ ರಂಗೋಲಿ, ಮೆಹಂದಿ ಹಾಕುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.