HomeGadag Newsನಿಮ್ಮ ಸುತ್ತಲಿನ ಪರಿಸರ ಸ್ವಚ್ಚತೆಗೆ ಜಾಗೃತಿ ವಹಿಸಿ

ನಿಮ್ಮ ಸುತ್ತಲಿನ ಪರಿಸರ ಸ್ವಚ್ಚತೆಗೆ ಜಾಗೃತಿ ವಹಿಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕರು ನಿಮ್ಮ ನಿಮ್ಮ ಮನೆಗಳನ್ನು ಸ್ವಚ್ಛವಾಗಿ ಇಟ್ಟುಕೊಂಡಂತೆ ಮನೆಯ ಸುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಕುರಿತು ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ಸುಭಾಷ ಬಿ.ಆದಿ ಅಧಿಕಾರಿಗಳಿಗೆ ಸೂಚಿಸಿದರು.

ಗದಗ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜರುಗಿದ ಜಿಲ್ಲಾಮಟ್ಟದ ಕಾರ್ಯಪಡೆ ಸಭೆಯಲ್ಲಿ ಅವರು ಮಾತನಾಡಿದರು.

ನಗರಗಳಲ್ಲಿ ತ್ಯಾಜ್ಯ ವಿಲೇವಾರಿ ಕೇಂದ್ರಗಳನ್ನು ಹಾಗೂ ಮರುಬಳಕೆ ಘಟಕಗಳನ್ನು ಇನ್ನಷ್ಟು ಬಲಪಡಿಸಬೇಕು. ಹಳೆಯ ಕಸದ ಗುಡ್ಡಗಳನ್ನು (ಲೆಗಸಿ ವೇಸ್ಟ್) ತೆರವುಗೊಳಿಸಿ ಶುದ್ಧೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಮನೆ-ಮನೆಗಳಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿ, ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಪರಿಣಾಮಕಾರಿಯಾಗಲಿ. ಮಳೆ ನೀರು ಮತ್ತು ಒಳಚರಂಡಿ ನೀರು ಮಿಶ್ರಣವಾಗದಂತೆ ತಾಂತ್ರಿಕ ಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು ಎಂದು ನಿರ್ದೇಶಿಸಿದರು.

ಕಟ್ಟಡ ನಿರ್ಮಾಣದಿಂದ ಉಂಟಾಗುವ ಕಸವನ್ನು ಮರುಬಳಕೆ ಮಾಡುವ ಘಟಕ ಸ್ಥಾಪಿಸಬೇಕು. ಅಪಾಯಕಾರಿ ಮತ್ತು ವೈದ್ಯಕೀಯ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕು. ನಗರಗಳಲ್ಲಿ ಮಲಿನಜಲ ಶುದ್ಧೀಕರಣ ಘಟಕಗಳನ್ನು ದುರಸ್ತಿಪಡಿಸಿ ನಿರಂತರ ಕಾರ್ಯನಿರ್ವಹಣೆಗೆ ಆದ್ಯತೆ ನೀಡಬೇಕು. ಘಟಕಗಳ ಬಳಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕೆಂದು ಅವರು ಸೂಚಿಸಿದರು.

ಸ್ಥಳೀಯ ಸಂಸ್ಥೆಗಳಿಂದ ವ್ಯಾಪಾರ ಮಾಡಲು ಟ್ರೇಡ್ ಪರವಾನಿಗೆ ನೀಡುವಾಗ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂಬ ಷರತ್ತಿನೊಂದಿಗೆ ಪರವಾನಿಗೆ ನೀಡಬೇಕು, ತಪ್ಪಿದಲ್ಲಿ ಪರವಾನಗಿ ರದ್ದು ಮಾಡಬೇಕು. ಹಸಿ ಕಸ, ಒಣಕಸ ಹಾಗೂ ವೈದ್ಯಕೀಯ ತ್ಯಾಜ್ಯ ವಿಂಗಡನೆ, ವಿಲೇವಾರಿ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕುರಿತಂತೆ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಆಗಬೇಕು ಎಂದು ಸೂಚಿಸಿದರು.

ಸ್ಥಳೀಯ ಸಂಸ್ಥೆವಾರು ಪ್ರತಿ ದಿನ ಸಂಗ್ರಹಿಸುವ ಕಸದ ಮಾಹಿತಿಯನ್ನು ಅಧಿಕಾರಿಗಳು ಒದಗಿಸಿದರು. ಗದಗನಲ್ಲಿ 75 ಟನ್, ಗಜೇಂದ್ರಗಡ 11 ಟನ್, ರೋಣ 8, ಮುಂಡರಗಿ 10, ಲಕ್ಷ್ಮೇಶ್ವರ 15, ನರಗುಂದ 14, ನರೇಗಲ್ ಶಿರಹಟ್ಟಿ ಹಾಗೂ ಮುಳುಗುಂದದಲ್ಲಿ ತಲಾ 7 ಟನ್ ಕಸ ಸಂಗ್ರಹಣೆ ಪ್ರತಿದಿನ ಮಾಡಿ ವಿಂಗಡಣೆ ಮೂಲಕ ವಿಲೆ ಮಾಡಲಾಗುತ್ತಿದೆ. ಗ್ರಾಮೀಣ ಬಾಗದಲ್ಲಿ ಒಣಕಸವನ್ನು ಗ್ರಾ.ಪಂ ಮಟ್ಟದಲ್ಲಿ ಸಂಗ್ರಹ ಮಾಡಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಡಿವೈಎಸ್ಪಿ ಮಹಾಂತೇಶ್ ಸಜ್ಜನರ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ, ಡಿಡಿಪಿಐ ಆರ್.ಎಸ್. ಬುರುಡಿ, ಜಿ.ಪಂ ಅಧಿಕಾರಿ ಚಳಗೇರಿ, ಡಿಎಚ್‌ಓ ಡಾ. ಎಸ್.ಎಸ್. ನೀಲಗುಂದ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಬಸವಂತಪ್ಪ, ಪರಿಸರ ಮಾಲಿನ್ಯ ಅಧಿಕಾರಿಗಳು ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

6 ತಿಂಗಳ ಗಡುವು

ರೊಚ್ಚು ನೀರು ನಿರ್ವಹಣೆ ಘಟಕ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಹಾಗೂ ಮನೆಗಳಿಗೆ ಪೈಪ್ ಅಳವಡಿಕೆಯನ್ನು ಸ್ಥಳೀಯ ಸಂಸ್ಥೆಗಳು ಮತ್ತು ಕೆಯುಐಡಿಎಫ್ಸಿ ಹಾಗೂ ಕೆಯುಡಬ್ಲೂಎಸ್ & ಡಿಬಿ ಇಲಾಖೆಗಳು ಸಮನ್ವಯದೊಂದಿಗೆ ಮುಂದಿನ ಆರು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಬಳಕೆಗೆ ನೀಡಬೇಕು ಎಂದು ಮುಚ್ಚಳಿಕೆ ಪತ್ರ ನೀಡುವಂತೆ ಗಡುವು ನೀಡಿದರಲ್ಲದೆ, ಈ ಕಾರ್ಯವು ನೀಡಿದ ಗಡುವಿನೊಳಗೆ ಪೂರ್ಣವಾಗಬೇಕು ಎಂದು ಮತ್ತೊಮ್ಮೆ ಸುಭಾಷ ಬಿ.ಆದಿ ಎಚ್ಚರಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!