ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ ನಿನ್ನೆ ನಿಧನರಾಗಿದ್ದಾರೆ. ರಾಕೇಶ್ ಪೂಜಾರಿ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಸಂಪೂರ್ಣವಾಗಿ ಕೊನೆಗೊಂಡಿದೆಯೋ ಅತವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಿರುವಾಗಲೇ ರಾಕೇಶ್ ಪೂಜಾರಿ ಸಾವಿನ ಬಗ್ಗೆ ರಿಷಬ್ ಶೆಟ್ಟಿ ಮೌನ ಮುರಿದಿದ್ದಾರೆ.
‘ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ. ಮತ್ತೆ ಹುಟ್ಟಿ ಬಾ ಗೆಳೆಯ. ನಿನ್ನ ಅತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ’ ಎಂದು ರಿಷಬ್ ಶೆಟ್ಟಿ ಅವರು ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂತಾರ: ಚಾಪ್ಟರ್ 1 ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಕೂಡ ರಾಕೇಶ್ ಪೂಜಾರಿ ಸಾವಿಗೆ ಸಂತಾಪ ಸೂಚಿಸಿದೆ. ನಟ ರಾಕೇಶ್ ಪೂಜಾರಿ ನಿಧನಕ್ಕೆ ತೀವ್ರ ಸಂತಾಪಗಳು. ಈ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ, ಅವರ ಆಪ್ತರಿಗೆ ಹಾಗೂ ಹಿತೈಷಿಗಳಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಈ ದುಃಖದ ಘಳಿಗೆಯಲ್ಲಿ ನಾವೆಲ್ಲರೂ ಅವರ ಕುಟುಂಬದೊಂದಿಗೆ ಇದ್ದೇವೆ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ.