ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ದೊಡ್ಡ ದೊಡ್ಡ ವ್ಯಕ್ತಿಗಳೇ ಇದಕ್ಕೆ ಬಲಿಯಾಗುತ್ತಿದ್ದಾರೆ. ವಿವಿಧ ರೀತಿಯ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ಗದಗ ಸೈಬರ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಿದ್ದು ನಾಯ್ಕರ್ ತಿಳಿಸಿದರು.
ಶನಿವಾರ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ನಡೆದ ಸೈಬರ್ ಅಪರಾಧ ಸುರಕ್ಷಾ-ಸಲಹಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೌರ ಕಾರ್ಮಿಕರಿಗೆ ಹಾಗೂ ಪುರಸಭೆಯ ಕಚೇರಿಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.ನಿತ್ಯ ಬೇರೆ ಬೇರೆ ತರಹದ ಮೊಬೈಲ್
ಕರೆಗಳು ಕಂಪನಿ, ಬೇರೆ ಬೇರೆ ವ್ಯಕ್ತಿಗಳಿಂದ ಬರುತ್ತಿರುತ್ತವೆ. ಆದರೆ ಸಾರ್ವಜನಿಕರು ಮೊಬೈಲ್ ಮೂಲಕ ಬರುವ ಅನಗತ್ಯ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು. ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಸುಳ್ಳು ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೆದರಿಸಿ ಹಣ ವಸೂಲಿ ಮಾಡುವುದು ಸೇರಿದಂತೆ ವಾಟ್ಸಾಪ್ ಮೂಲಕ ಬರುವ ಪಿಎಂ ಕಿಸಾನ್ ಯೋಜನೆ, ಬ್ಯಾಂಕ್ ಕೆವೈಸಿ ಅಪ್‌ಡೇಟ್, ಎಪಿಕೆ ಫೈಲ್‌ಗಳ ಲಿಂಕ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ. ವಿವಿಧ ಬ್ಯಾಂಕ್ ಅಧಿಕಾರಿಗಳ, ಪಾರ್ಸಲ್, ಕೋರಿಯರ್ ಹೆಸರಿನಲ್ಲಿ ಕರೆ ಮಾಡಿ ಕಾನೂನು ಬಾಹಿರ ವಸ್ತುಗಳನ್ನು ಹೊರದೇಶಕ್ಕೆ ಸಾಗಾಟ ಮಾಡಿರುವುದಾಗಿ ಹೇಳಿ ಹೆದರಿಸಿ ಹಣ ವಸೂಲಿ ಮಾಡುವ ಬಗ್ಗೆ ಎಚ್ಚರವಾಗಿರಿ ಎಂದು ಅವರು ಮಾಹಿತಿ ನೀಡಿದರು.
ಒಂದು ವೇಳೆ ಸೈಬರ್ ಅಪರಾಧ ಕೃತ್ಯದಿಂದ ನಿಮ್ಮ ಹಣ ದೋಚುವ ಕಾರ್ಯ ನಡೆದಲ್ಲಿ ಸಮೀಪದ ಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಮಂಜುನಾಥ ಮುದಗಲ್ಲ, ಹೆಡ್ ಕಾನ್ಸ್ಟೇಬಲ್ ನಾಮದೇವ ಪಾಸ್ತೆ, ಪುರಸಭೆಯ ಹನಮಂತಪ್ಪ ನಂದೆಣ್ಣವರ ಸೇರಿದಂತೆ ಪುರಸಭೆಯ ಪೌರ ಕಾರ್ಮಿಕರು ಇದ್ದರು.