ವಿಜಯಸಾಕ್ಷಿ ಸುದ್ದಿ, ಗದಗ: ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿರಬೇಕು ಮತ್ತು ವ್ಯವಹಾರ ಮಾಡುತ್ತಾ ಸಾಗಿದಂತೆ ಬ್ಯಾಂಕಿನ ಜೊತೆಗೆ ಉತ್ತಮ ಬಾಂಧ್ಯವನ್ನು ಹೊಂದಬೇಕು. ಇದರಿಂದ ಸಾಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪುರುಷರಿಗೆ ಎಷ್ಟು ಸಾಲ ಕೊಡುತ್ತೇವೆಯೋ, ಅಷ್ಟೇ ಸಾಲವನ್ನು ಮಹಿಳೆಯರಿಗೂ ನೀಡುತ್ತಿದ್ದೇವೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಗದಗ ಸಿನಿಯರ್ ರೀಜಿನಲ್ ಮ್ಯಾನೇಜರ್ ಎ. ಪ್ರಕಾಶ ಹೇಳಿದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದಿಂದ ಹಮ್ಮಿಕೊಂಡ ಲಿಂ. ಶ್ರೀಮತಿ ಈರಮ್ಮ ಚಂದ್ರಶೇಖರಯ್ಯ ಧನ್ನೂರಹಿರೇಮಠ ಇವರ ದತ್ತಿ ಉಪನ್ಯಾಸದ ನಿಮಿತ್ತ ಮಹಿಳೆಯರ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಮಹತ್ವ ಹಾಗೂ ಸೈಬರ್ ಕ್ರೈಂ ಮಾಹಿತಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಾಂತ್ರಿಕತೆ ಅಭಿವೃದ್ಧಿಯಾದಂತೆ ತೊಂದರೆಗಳು ಕೂಡಾ ಹೆಚ್ಚಾಗುತ್ತದೆ. ಈ ದೇಶದಲ್ಲಿ ಸೈಬರ್ ಅಪರಾಧ ಮಿತಿಮೀರಿ ನಡೆಯುತ್ತಿದೆ. ಅದಕ್ಕೆ ಸಾರ್ವಜನಿಕರು ಜಾಗೃತರಾಗಬೇಕು. ಯಾವುದೇ ಬ್ಯಾಂಕುಗಳು ತಮ್ಮ ವಯಕ್ತಿಕ ವಿವರಗಳನ್ನು ಯಾವುದೇ ಕಾರಣಕ್ಕೂ ಕೇಳುವುದಿಲ್ಲ. ಸೈಬರ್ ಕ್ರೈಂ ಒಮ್ಮೆ ಕಳೆದುಕೊಂಡ ಹಣ ಪುನಃ ಪಡೆಯಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಜಾಗೃತರಾಗಬೇಕೆಂದು ತಿಳಿಸಿದರು.
ಅತಿಥಿ ಉಪನ್ಯಾಸಕರಾದ ಎಸ್.ಬಿ.ಆಯ್. ಗದಗ ಎಫ್.ಆಯ್. ಮ್ಯಾನೇಜರ್ ಅನಂತ್ ಪ್ರಸಾದ ಮಾತನಾಡುತ್ತಾ, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರನ್ನು ಸ್ವಾಲಂಬಿಗಳನ್ನಾಗಿ ಮಾಡಲು ಶ್ರಮಿಸುತ್ತಿವೆ. ಬ್ಯಾಂಕುಗಳಲ್ಲಿ ವೈಯಕ್ತಿಕವಾಗಿ ಯಾವುದೇ ರೀತಿಯಿಂದ ದೂರವಾಣಿ ಮುಖಾಂತರ ಮಾಹಿತಿಯನ್ನು ಕೇಳುವುದಿಲ್ಲ. ಆದ್ದರಿಂದ ಮೊಬೈಲ್‌ನಲ್ಲಿ ಮಾಹಿತಿ ಬಗ್ಗೆ ಕರೆಗಳು ಬಂದರೆ, ಅವುಗಳಿಗೆ ಸ್ಪಂದಿಸಬಾರದು ಮತ್ತು ಮೊಬೈಲ್ ಲಿಂಕ್‌ಗಳಿಗೆ ತಮ್ಮ ವಿವರಗಳನ್ನು ಒದಗಿಸಬಾರದು. ಮೊಬೈಲ್ ಬಳಕೆಯನ್ನು ಅಗತ್ಯಕ್ಕೆ ತಕ್ಕಷ್ಟೇ ಸೀಮಿತಗೊಳಿಸುವುದು ಸೂಕ್ತ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷರಾದ ನಂದಾ ಚಂದ್ರು ಬಾಳಿಹಳ್ಳಿಮಠ ಮಾತನಾಡುತ್ತಾ, ಮಹಿಳೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಸಾಕಷ್ಟು ಯೋಜನೆಗಳನ್ನು ತರುವುದರೊಂದಿಗೆ, ಕಡಿಮೆ ದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತಿದೆ ಎಂದು ತಿಳಿಸಿದರು.
ಶಿವಲೀಲಾ ಹಿರೇಮಠ ಪ್ರಾರ್ಥಿಸಿದರೆ, ಮಹಿಳಾ ಘಟಕದ ಅಧ್ಯಕ್ಷರಾದ ನಂದಾ ಚಂದ್ರು ಬಾಳಿಹಳ್ಳಿಮಠ ಸ್ವಾಗತಿಸಿದರು. ಪ್ರಾಸ್ತಾವಿಕ ನುಡಿಯನ್ನು ಸಂಸ್ಥೆಯ ದತ್ತಿ ಉಪನ್ಯಾಸ ಉಪ ಸಮಿತಿ ಚೇರಮನ್ ಚಂದ್ರು ಬಾಳಿಹಳ್ಳಿಮಠ ನಡೆಸಿಕೊಟ್ಟರು. ಲಿಂಗಕೈರಾದ ಮಹನೀಯರ ಕಿರು ಪರಿಚಯವನ್ನು ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಸುವರ್ಣಾ ಎಸ್.ಮದರಿಮಠ ಮಾಡಿದರು. ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಸುಜಾತಾ ಎಸ್.ಗುಡಿಮನಿ ವಂದಿಸಿದರು.
ನಮ್ಮ ಬ್ಯಾಂಕ್‌ನಿಂದ ಬ್ಯೂಟಿಪಾರ್ಲರ್, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಸೇರಿದಂತೆ ಸಣ್ಣ ಪ್ರಮಾಣದ ತರಬೇತಿಗಳನ್ನು ಕೂಡಾ ಕೊಡಿಸುತ್ತಿದ್ದೇವೆ. ತರಬೇತಿ ನಂತರ ಅವರಿಗೆ ಸ್ವಯಂ ಉದ್ಯೋಗ ಮಾಡಲು ಸಾಲ ಸೌಲಭ್ಯ ನೀಡಲಾಗುತ್ತದೆ. ಮಹಿಳೆಯರಿಗೆ ಸರ್ಕಾರವು ಸಾಕಷ್ಟು ಯೋಜನೆಗಳ ಜೊತೆಗೆ ಸೌಲಭ್ಯಗಳನ್ನು ಕೂಡಾ ತಂದಿದೆ ಎಂದು ಎ. ಪ್ರಕಾಶ ತಿಳಿಸಿದರು.