ಬೆಂಗಳೂರು: ಹಲ್ಲಿಲ್ಲದ ಚಿಕ್ಕ ಮಕ್ಕಳಿಂದ ಹಿಡಿದು ಹಲ್ಲು ಉದುರಿದ ವಯೋವೃದ್ಧರವರೆಗೂ ಇಷ್ಟಪಟ್ಟು ಸಲೀಸಾಗಿ ತಿನ್ನುವ ಏಕೈಕ ಆಹಾರವೆಂದರೆ ಇಡ್ಲಿ. ಇಡ್ಲಿಯ ಇನ್ನೊಂದು ವಿಶೇಷ ಗುಣವೆಂದರೆ ಅದು ಜೀರ್ಣವಾಗಲು ತುಂಬಾ ಸುಲಭ. ಹಾಗಾಗಿ ಗರ್ಭಿಣಿಯರು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾದವರು ಇಡ್ಲಿ ತಿನ್ನುವುದು ಒಳ್ಳೆಯದು ಎಂದು ವೈದ್ಯರು ಆಗಾಗ ಸಲಹೆ ನೀಡುವುದು ನಾವು-ನೀವು ಕೇಳಿದ್ದೇವೆ.
ಆದ್ರೆ ಇದೀಗ ಬೆಂಗಳೂರಿನ ವಿವಿಧೆಡೆಗಳಿಂದ ಇಡ್ಲಿ ಮಾದರಿಗಳನ್ನು ಪಡೆದಿದ್ದ ಆಹಾರ ಇಲಾಖೆ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಇದೀಗ ಪ್ರಯೋಗಾಲಯ ವರದಿ ಬಂದಿದ್ದು, 35ಕ್ಕೂ ಹೆಚ್ಚು ಇಡ್ಲಿ ಮಾದರಿಗಳು ಅಸುರಕ್ಷಿತ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಇದು, ರಸ್ತೆಬದಿಯ ಇಡ್ಲಿ ಖರೀದಿಸಿ ತಿನ್ನುವ ಮೊದಲು ಎರಡು ಬಾರಿ ಯೋಚಿಸುವಂತೆ ಮಾಡಿದೆ.
ಬೆಂಗಳೂರಿನ ಹಲವಡೆ ಇತ್ತೀಚೆಗೆ ಇಡ್ಲಿ ತಯಾರಿಸಲು ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್ ಬಳಕೆ ಮಾಡಲಾಗುತ್ತಿದೆ. ಇಡ್ಲಿ ಮಾಡುವಾಗ ಮಾತ್ರವಲ್ಲದೆ ಆಹಾರವನ್ನು ಬಡಿಸುವಾಗ ಮತ್ತು ಪ್ಯಾಕ್ ಮಾಡುವಾಗಲೂ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಹಾಳೆಯು ಶಾಖಕ್ಕೆ ಒಡ್ಡಿಕೊಂಡು ಹಾನಿಕಾರಕ ವಸ್ತುವನ್ನು ಹೊರಸೂಸುತ್ತಿದೆ. ಇದು ಕ್ಯಾನ್ಸರ್ ಕಾರಕವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು.
ತಜ್ಞರ ಎಚ್ಚರಿಕೆ ಬೆನ್ನಲ್ಲೇ ಆಹಾರ ಇಲಾಖೆ ಬೆಂಗಳೂರಿನ ಹಲವಡೆಯಿಂದ ಇಡ್ಲಿ ಮಾದರಿಗಳನ್ನು ಸಂಗ್ರಹ ಮಾಡಿದೆ. ಆಹಾರ ಹಾಗೂ ಗುಣಮಟ್ಟ ಇಲಾಖೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ 500ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿದೆ. ಹೋಟೆಲ್ ಹಾಗೂ ತಿಂಡಿಗಳ ಅಂಗಡಿಗಳಿಂದಲೂ ಮಾದರಿ ಸಂಗ್ರಹ ಮಾಡಲಾಗಿದೆ. ಇವುಗಳಲ್ಲಿ 35 ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಅಸುರಕ್ಷಿತ ಎಂಬ ವರದಿ ಬಂದಿದೆ.