ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇನ್ನು ಮುಂದೆ ನಿಮ್ಮ ಟ್ರಾಕ್ಟರ್‌ಗಳಲ್ಲಿ ಟೇಪ್ ಹಾಕಿಕೊಂಡು ಜೋರಾಗಿ ಹಾಡುಗಳನ್ನು ಕೂಗಿಸುತ್ತ ಪಟ್ಟಣದಲ್ಲಿ, ಊರುಗಳಲ್ಲಿ, ಗ್ರಾಮಗಳಲ್ಲಿ ತಿರುಗಾಡುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಇನ್ನು ಮುಂದೆ ನರೇಗಲ್ಲ ಪೊಲೀಸರು ನಿಮ್ಮ ಟೇಪ್‌ಗಳನ್ನು ವಶಪಡಿಸಿಕೊಳ್ಳುತ್ತಾರೆ, ನಿಮಗೆ ದಂಡ ಹಾಕುತ್ತಾರೆ, ಇದಕ್ಕೂ ನೀವು ಬಗ್ಗದಿದ್ದರೆ ನಿಮ್ಮ ಗಾಡಿಯನ್ನೇ ಸೀಜ್ ಮಾಡುತ್ತಾರೆ.
ನರೇಗಲ್ಲ ಪಟ್ಟಣ ಮತ್ತು ಗ್ರಾಮಗಳಲ್ಲಿ ಟ್ರಾಕ್ಟರ್ ಹಾಡಿನ ಹಾವಳಿ ಹೆಚ್ಚಾಗಿದೆ. ಹಿಂದೆ ಬರುವ ವಾಹನದವರು ಎಷ್ಟೇ ಹಾರ್ನ್ ಮಾಡಿದರೂ ಕೇಳಿಸದ ಟ್ರಾಕ್ಟರ್ ಚಾಲಕರು ಹಾಗೇ ಸಾಗುತ್ತ ಅನೇಕ ಅನಾಹುತಗಳಿಗೆ ಮತ್ತು ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಅದಕ್ಕಾಗಿ ಈ ಕಠಿಣ ಕ್ರಮವನ್ನು ತೆಗೆದುಕೊಳ್ಳಲೇಬೇಕಾಗಿದೆ ಎಂದು ಪಿಎಸ್‌ಐ ಐಶ್ವರ್ಯ ನಾಗರಾಳ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಜೋರಾಗಿ ಹಾಡುಗಳನ್ನು ಹಾಕಿಕೊಂಡು ಓಡಾಡುವುದರಿಂದ ಹೃದಯ ರೋಗಿಗಳಿಗೆ, ಚಿಕ್ಕ ಮಕ್ಕಳಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಇನ್ನಿಲ್ಲದ ತೊಂದರೆಯಾಗುತ್ತಿರುವುದನ್ನು ಮನಗಂಡು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.
ಇದಕ್ಕೆ ಸಂಬಂಧಿಸಿದಂತೆ ಕಳೆದ ಎರಡು ಮೂರು ದಿನಗಳಿಂದ ತಾವು ಮತ್ತು ತಮ್ಮ ಸಿಬ್ಬಂದಿಯವರು ಇಂತಹ ಟ್ರಾಕ್ಟರ್ ಚಾಲಕರನ್ನು ಹಿಡಿದು ಜಾಗೃತಿ ಮೂಡಿಸುತ್ತಿದ್ದೇವೆ. ಇನ್ನು ಎರಡು ಮೂರು ದಿನದೊಳಗೆ ಎಲ್ಲ ಟ್ರಾಕ್ಟರ್ ಚಾಲಕರು ಅಥವಾ ಮಾಲೀಕರು ತಮ್ಮ ಟೇಪ್‌ಗಳನ್ನು ಪಟ್ಟಣದೊಳಗೆ ಬಂದ್ ಮಾಡಿಕೊಳ್ಳದಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದೆಂದರು.



