ಬೆಂಗಳೂರು:- ನಮ್ಮ ಮೆಟ್ರೋದಲ್ಲಿ ಪ್ರಯಾಣಿಸೋ ಹೆಣ್ಮಕ್ಕಳು ತಪ್ಪದೇ ಈ ಸುದ್ದಿ ನೋಡಲೇಬೇಕು. ಮೆಟ್ರೋದಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುವ ಮೂಲಕ ಅಪರಿಚಿತನೋರ್ವ ವಿಕೃತಿ ಮೆರೆದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ಬೆನ್ನಲ್ಲೇ ಇದೀಗ ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ.
“ಮೆಟ್ರೋ ಕ್ಲಿಕ್ಸ್” ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೆಟ್ರೋದಲ್ಲಿನ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. 5,538 ಹಿಂಬಾಲಕರನ್ನು ಹೊಂದಿರುವ ಖಾತೆಯಲ್ಲಿ ಸುಮಾರು 13ಕ್ಕೂ ಹೆಚ್ಚು ವಿಡಿಯೋಗಳನ್ನು ಅಪರಿಚಿತನೋರ್ವ ಹಂಚಿಕೊಂಡಿದ್ದಾನೆ. ಮೆಟ್ರೋ ರೈಲಿನ ಒಳಗೆ, ನಿಲ್ದಾಣಗಳಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದೆ.
ಸದ್ಯ ಅಪರಿಚಿತನ ವಿಕೃತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಲ್ಲಾ ವಿಡಿಯೋಗಳು ಡಿಲೀಟ್ ಆಗಿವೆ. ಐಟಿ ಆ್ಯಕ್ಟ್ 2008 ಸೆಕ್ಷನ್ 67, ಬಿಎನ್ಎಸ್ 78(2)ರಡಿ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.