ವಿಜಯಸಾಕ್ಷಿ ಸುದ್ದಿ, ಧಾರವಾಡ: ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಕ್ತಾಯದ ಹಂತಕ್ಕೆ ಬಂದಿದ್ದು, ಸರ್ಕಾರದಿಂದ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಲ್ಯಾಪ್ಸ್ ಆಗದಂತೆ ಬಳಸಬೇಕು. ಮುಖ್ಯವಾಗಿ ಫಲಾನುಭವಿ ಆಧಾರಿತ ಯೋಜನೆಗಳ ಕುರಿತು ಪರಿಣಿತ ತಂಡಗಳಿಂದ ಸೋಶಿಯೊ ಎಕನಾಮಿಕ್ ಅಧ್ಯಯನ ಕೈಗೊಂಡು ಯೋಜನೆಗಳ ಸುಧಾರಣೆ ಮತ್ತು ಬೇಡಿಕೆಗಳ ಕುರಿತು ವರದಿ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಅವರು ಮಂಗಳವಾರ ಬೆಳಿಗ್ಗೆ ಜಿ.ಪಂ ಸಭಾಂಗಣದಲ್ಲಿ 2025-26ನೇ ಸಾಲಿನ ನವೆಂಬರ್ 2025ರ ಅಂತ್ಯಕ್ಕೆ ಕೊನೆಗೊಂಡಂತೆ ಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ, ರೈತ ಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು. ಇಲಾಖೆಗಳ ಅಧಿಕಾರಿಗಳು ಇನ್ನೂ ಹೆಚ್ಚು ಕ್ರಿಯಾಶೀಲವಾಗಬೇಕು. ರೇಷ್ಮೆ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರದ ವಿಸ್ತೀರ್ಣವಾಗಬೇಕು. ಎಲ್ಲ ಅಧಿಕಾರಿಗಳು ಸೇರಿ ಸಮನ್ವಯದಿಂದ ಕೆಲಸ ನಿರ್ವಹಿಸಬೇಕು. ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳನ್ನು ಬರೀ ಯಾಂತ್ರಿಕವಾಗಿ ಅನುಷ್ಠಾನಗೊಳಿಸದೇ ಅದರ ಉಪಯುಕ್ತತೆ ಮತ್ತು ಲಾಭವನ್ನು ಜನರಿಗೆ ತಲುಪುವಂತೆ ಮಾಡುವಲ್ಲಿ ಹೆಚ್ಚು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯಿಂದ ಅನೇಕ ಸಮಸ್ಯೆಗಳಿಗೆ ನಾವು ಪರಿಹಾರ ಕಾಣಬಹುದಾಗಿದೆ ಎಂದು ಅವರು ತಿಳಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಸುತ್ತೋಲೆಯಂತೆ ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸುವ ಕುರಿತು ಮತ್ತು ಜಿಲ್ಲಾ ಯೋಜನಾ ವರದಿಯನ್ನು ಸಿದ್ಧಪಡಿಸುವ ಕುರಿತು ಕ್ರಮವಹಿಸಲಾಗಿದೆ. ಜನವರಿ ತಿಂಗಳೊಳಗೆ ನಿಗದಿತ ಗುರಿ ಸಾಧಿಸಲಾಗುವುದು ಎಂದು ಹೇಳಿದರು.
ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸ್ವಾಗತಿಸಿದರು. ಜಿ.ಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಮಾರುತಿ ತಳವಾರ ವಂದಿಸಿದರು.
ಬಾಕ್ಸ್
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅವರ ಬಗ್ಗೆ ವಿಶೇಷ ಕಾಳಜಿ ಮತ್ತು ಅಭ್ಯಾಸ ಹಾಳಿಗಳನ್ನು ನೀಡಿ, ಸೂಕ್ತ ತರಬೇತಿ ನೀಡಿ, ಪರೀಕ್ಷೆಯ ಕುರಿತು ಆತ್ಮವಿಶ್ವಾಸ ಹೆಚ್ಚಿಸಬೇಕೆಂದು ಹೇಳಿದರು.



