ವಿಜಯಸಾಕ್ಷಿ ಸುದ್ದಿ, ಡಂಬಳ: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇಂತಹ ಆರೋಗ್ಯ ಸಮಸ್ಯೆಗೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಗ್ರಾಮೀಣ ಜನತೆಗೆ ಚಿಕಿತ್ಸೆ ನೀಡಸಲಾಗುತ್ತಿದೆ ಎಂದು ಯುವ ಮುಖಂಡ ಮನೋಜ ರಾಠೋಡ ಹೇಳಿದರು.
ಡಂಬಳ ಹೋಬಳಿಯ ಮುರಡಿ ತಾಂಡಾದ ಸಂತ ಶ್ರೀ ಸೇವಾಲಾಲ್ ಮಹಾರಾಜ್ ದೇವಸ್ಥಾನದಲ್ಲಿ ರಾಪ್ ಹಾಸ್ಪಿಟಲ್ ಅವರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ಆ ಹಿನ್ನೆಲೆಯಲ್ಲಿ ಬಡ ಜನರ ಸೇವೆಯ ಮೂಲಕ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು ಸಾಧ್ಯ ಎಂಬುದನ್ನು ಅರಿತಿದ್ದೇನೆ ಎಂದು ಹೇಳಿದರು.
ಡಾ. ರೊನಾಲ್ಡ್ ಐ.ಖಾನಾಪುರ ಮಾತನಾಡಿ, ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಿಬಿರದಲ್ಲಿ ಸುಮಾರು 200 ವೃದ್ಧರು, ಮಕ್ಕಳು, ಮಹಿಳೆಯರು, ಯುವಕರು ಚಿಕಿತ್ಸೆ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಅರ್ಚಕ ಸೋಮಲಪ್ಪ ಪವಾರ್, ಶಂಕ್ರಪ್ಪ ಪವಾರ್, ಮಾಂತೇಶ್ ರಾಠೋಡ್, ರಮೇಶ್ ನಗರ್, ಶಂಕ್ರಪ್ಪ ರಾಠೋಡ್, ಪಾರವ್ವ ಪವಾರ್, ಲಕ್ಷ್ಮೀ ಬೂದಿಹಾಳ ಮುಂತಾದವರಿದ್ದರು.