ಉತ್ತರ ಪ್ರದೇಶ:- ಉತ್ತರ ಪ್ರದೇಶದ ನೋಯ್ಡಾದಲ್ಲಿ ಯುವಕರಿಬ್ಬರು ಟೆಸ್ಟ್ ಡ್ರೈವ್ಗೆಂದು ಕೇಳಿ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಎಷ್ಟೇ ಹೊತ್ತಾದರೂ ಬಾರದೇ ಇದ್ದಿದ್ದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಂಗೆ ಇಬ್ಬರು ವ್ಯಕ್ತಿಗಳು ಗುರುವಾರ ಭೇಟಿ ನೀಡಿದ್ದರು. ಇಡೀ ಶೋರೂಮ್ ಪರಿಶೀಲಿಸಿ ಎಸ್ ಯುವಿ ಖರೀದಿಸುವುದಾಗಿ ಹೇಳಿದ್ದರು. ಆದರಂತೆ ಮಾಲೀಕನ ಬಳಿ ಟೆಸ್ಟ್ ಡ್ರೈವ್ ಕೇಳಿದ್ದರು. ಅವರು ತಮ್ಮ ಸಿಬ್ಬಂದಿಯನ್ನು ಯಾರನ್ನಾದರೂ ಕರೆದುಕೊಂಡು ಹೋಗುವಂತೆ ಹೇಳಿ ಕಾರನ್ನು ಟೆಸ್ಟ್ ಡ್ರೈವ್‌ಗೆ ನೀಡಿದ್ದರು.
ಆದರೆ ಈ ಕಿರಾತಕರು ಸ್ವಲ್ಪ ದೂರ ಹೋದ ನಂತರ ಶೋರೂಂ ಉದ್ಯೋಗಿಯನ್ನು ಕಾರಿನಿಂದ ಕೆಳಕ್ಕೆ ತಳ್ಳಿ ಇಬ್ಬರು ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಕಾರು ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಶೋರೂಂನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.
ಕಾರನ್ನು ಹೊರಗೆ ತೆಗೆದುಕೊಂಡು ಹೋದವರು ವಾಪಸ್ ಬರದ ಕಾರಣ ಶೋರೂಂ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮಾಹಿತಿ ಪಡೆದ ನಾಲೆಡ್ಜ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.