ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಇತ್ತೀಚೆಗೆ ಧಾರವಾಡ ಜನ್ನತ ನಗರದ ಮನೆಯೊಂದರಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡು ಗಾಯಗೊಂಡ ಗಾಯಾಳುಗಳನ್ನು ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ)ಯಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡುಗೆ ಅನಿಲ ಸೋರಿಕೆಯಾಗಿ ಮನೆ ತುಂಬಿಕೊಂಡು ಅವಘಡ ಸಂಭವಿಸಿದೆ. ಆಫ್ರಿನ್ ಎಂಬ ಮಹಿಳೆ ಶೇ. 80ರಷ್ಟು ಸುಟ್ಟು ಹೋಗಿದ್ದಾರೆ. ಉಳಿದವರು ಬೆಂಕಿಯಿಂದ ಸುಟ್ಟು ಗಾಯಗೊಂಡಿದ್ದಾರೆ. ಅವರ ಚಿಕಿತ್ಸಾ ಕಾರ್ಯ ಮುಂದುವರೆದಿದೆ. ಚಳಿಗಾಲದಲ್ಲಿ ಅಡುಗೆ ಅನಿಲ ಸೋರಿಕೆ ಆಗುತ್ತಿದೆ. ಕಳೆದ ಬಾರಿ ಸಹ ಇದೇ ರೀತಿಯಾಗಿತ್ತು. ಈ ಬಗ್ಗೆ ಅಧ್ಯಯನ ಮಾಡಬೇಕಿದೆ. ಸಾರ್ವಜನಿಕರು ಅಡುಗೆ ಅನಿಲ ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಗಾಯಾಳುಗಳ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಸಚಿವರು ಗಾಯಾಳುಗಳ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಡಿಸಿಪಿ ಮಹಾನಿಂಗ ನಂದಗಾವಿ, ಹುಬ್ಬಳ್ಳಿ ಶಹರ ತಹಸೀಲ್ದಾರರಾದ ಮಹೇಶ ಭಗವಂತ ಗಸ್ತೆ, ಕೆಎಂಸಿಆರ್‌ಐ ವೈದ್ಯರು ಉಪಸ್ಥಿತರಿದ್ದರು.



