HomeAgricultureಪ್ರಜ್ಞಾವಂತರಾಗಿ, ಪರಿಸರ ಉಳಿಸಿ

ಪ್ರಜ್ಞಾವಂತರಾಗಿ, ಪರಿಸರ ಉಳಿಸಿ

For Dai;y Updates Join Our whatsapp Group

Spread the love

ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. 1972ರಲ್ಲಿ ವಿಶ್ವಸಂಸ್ಥೆಯು ಯುಎನ್ ಜನರಲ್ ಅಸೆಂಬ್ಲಿಯು ಈ ದಿನವನ್ನು ಸ್ಥಾಪಿಸಿತು. ಪರಿಸರದ ಕುರಿತಾಗಿ ಜಾಗೃತಿಯನ್ನು ಮೂಡಿಸುವಲ್ಲಿ ಹಾಗೂ ಮಾನವನ ಚಟುವಟಿಕೆಗಳಿಂದ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಅದಕ್ಕೆ ಕಂಡುಕೊಳ್ಳುವ ಪರಿಹಾರೋಪಾಯಗಳನ್ನು ತಿಳಿಸಿಕೊಡುವಲ್ಲಿ ವಾರ್ಷಿಕವಾಗಿ 150ಕ್ಕೂ ಹೆಚ್ಚು ದೇಶಗಳು ಈ ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತವೆ.

ಪ್ರತಿ ವರ್ಷ ವಿಶ್ವಸಂಸ್ಥೆಯು ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಪ್ರಸ್ತುತ ದಿನಮಾನಗಳಲ್ಲಿ ಪರಿಸರ ಸಮಸ್ಯೆಯಿಂದ ತಲೆದೋರುವ ಅನಾಹುತಗಳನ್ನು ಚರ್ಚಿಸುವುದರ ಮೂಲಕ ಆ ವಿಷಯವನ್ನು ಆಯ್ದುಕೊಂಡು ಆ ವರ್ಷದ ಧ್ಯೇಯ ವಾಕ್ಯನ್ನಾಗಿಸಿಕೊಂಡು ಎಲ್ಲ ರಾಷ್ಟ್ರಗಳ, ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಸಾಮೂಹಿಕವಾಗಿ ಆ ವಿಷಯದಡಿಯಲ್ಲಿ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸುತ್ತವೆ. ಇಂದಿನ ಕೈಗಾರಿಕೀಕರಣ, ಔದ್ಯೋಗಿಕರಣ ಹಾಗೂ ಪಳೆಯುಳಿಕೆ ಇಂಧನಗಳ ಬಳಕೆಯಿಂದಾಗಿ ಪರಿಸರದ ಮೇಲೆ ಅತ್ಯಂತ ದುಷ್ಪರಿಣಾಮವನ್ನುಂಟು ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯ ತುರ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಅದಕ್ಕೆ ಪ್ರಜ್ಞಪೂರ್ವಕವಾದ ಕ್ರಮವನ್ನು ಕೈಗೊಳ್ಳುವುದು ಅತಿ ಮುಖ್ಯವಾಗಿದೆ.

ಈ ದಿಸೆಯಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದರ ಮೂಲಕ ಹವಾಮಾನ ಬದಲಾವಣೆಯಿಂದಾಗಿ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಹವಾಮಾನ ಬದಲಾವಣೆ ಎಂಬುದು ಒಂದು ಪ್ರದೇಶದಲ್ಲಿ ದೀರ್ಘಕಾಲದ ವರೆಗೆ ತಾಪಮಾನ ಮತ್ತು ಹವಾಮಾನ ಮಾದರಿಗಳಲ್ಲಿ ನೈಸರ್ಗಿಕವಾಗಿ ಅಥವಾ ಮಾನವನ ಚಟುವಟಿಕೆಯಿಂದ ಉಂಟಾಗುವಂತಹ ಬದಲಾವಣೆಯಾಗಿದೆ. ಬದಲಾಗುತ್ತಿರುವ ಹವಾಮಾನ ಒಟ್ಟಾರೆಯಾಗಿ ಶುಷ್ಕ ಪರಿಸ್ಥಿತಿಗೆ ಕಾರಣವಾಗಿದೆ. ಇದಕ್ಕೆ ಜ್ವಲಂತ ಉದಾಹರಣೆ, ಇತ್ತೀಚಿಗೆ ಅಮೆರಿಕಾದ ಕಾಡುಗಳಲ್ಲಿ ಕಂಡು ಬಂದ ಕಾಡ್ಗಿಚ್ಚಿ ನಿಂದಾದ ಪರಿಣಾಗಳು.

ಕಳೆದ ಎರಡು ಶತಮಾನಗಳಲ್ಲಿ ಮಾನವನ ಚಟುವಟಿಕೆಯಿಂದಾಗಿ ಉಷ್ಣತೆ ಹೆಚ್ಚಾಗುತ್ತಿದೆ. ಸೂರ್ಯನ ಶಕ್ತಿಯು ಭೂಮಿಯನ್ನು ತಲುಪಿದಾಗ ಕೆಲವೊಂದಿಷ್ಟು ಭಾಗ ಹೀರಲ್ಪಟ್ಟು ಉಳಿದ ಶಕ್ತಿಯು ಪ್ರತಿಫಲಿಸಲ್ಪಡುತ್ತದೆ. ಈ ಶಾಖಶಕ್ತಿಯು ಮಾನವನ ಚಟುವಟಿಕೆಯಿಂದ ಸಂಗ್ರಹಿತವಾದ ಅತಿಹೆಚ್ಚಿನ ಸಾಂದ್ರತೆಯ ಹಸಿರು ಮನೆ ಅನಿಲಗಳ ಪರಿಣಾಮದಿಂದಾಗಿ ಅದರ ತೀವ್ರತೆಯ ಹೆಚ್ಚಳದಿಂದ ತಾಪಮಾನಕ್ಕೆ ಕಾರಣವಾಗುತ್ತದೆ. ಇವೆಲ್ಲವೂ ಕೂಡ ಮಾನವ ಹಾಗೂ ಜೀವವೈವಿಧ್ಯತೆಯ ಮೇಲೆ ದುಷ್ಪರಿಣಾಮವನ್ನುಂಟುಮಾಡುತ್ತದೆ.

ವಿಜ್ಞಾನಿಗಳ ಸಂಶೋಧನಾ ಸಮೀಕ್ಷೆ ಪ್ರಕಾರ ಪ್ರಕೃತಿ ಬಿಕಟ್ಟಿನಲ್ಲಿದೆ. ಒಂದು ಮಿಲಿಯನ್ ಪ್ರಭೇದಗಳು ಅಳಿವಿನಂಚಿನಲ್ಲಿವೆ. ಅರಣ್ಯನಾಶದಿಂದಾಗಿ ಆಹಾರ ಕೊರತೆ ಉಂಟಾಗಿ ಸಂತತಿಗಳು ಕ್ಷೀಣಿಸುತ್ತಿವೆ. ರಾಸಾಯನಿಕಗಳ ವಸ್ತುಗಳ ಬಳಕೆ ಮಾಲಿನ್ಯಕ್ಕೆ ಕಾರಣವಾಗಿ ಸಂತಾನೋತ್ಪತ್ತಿಯು ಕುಂಠಿತಗೊಂಡು ಅನೇಕ ಪ್ರಭೇದಗಳ ಸಂತತಿಯು ನಾಶವಾಗುತ್ತಿದೆ. ಮಾನವನಲ್ಲಿಯೂ ಸಹ ಆರೋಗ್ಯದಲ್ಲಿ ವೈಪರಿತ್ಯಗಳು ಕಂಡುಬಂದು ಶ್ವಾಸಕೋಶ ಸಂಬಂಧಿತ ಅನೇಕ ಕಾಯಿಲೆಗಳನ್ನು ಉಂಟು ಮಾಡುತ್ತಿದೆ. ಪ್ರಕೃತಿಯನ್ನು ಒದಗಿಸಿದ ಭೂಮಿ ಅತಿ ಮುಖ್ಯ. ಜಾಗತಿಕ ಹಸಿರು ಮನೆ ಅನಿಲವನ್ನು ಕಡಿಮೆ ಮಾಡುವಲ್ಲಿ ಸಾಗರವು ಕೇಂದ್ರಬಿಂದುವಾಗಿದೆ. ಆದರೆ ಇಂದು ಮಾಲಿನ್ಯತೆಯ ಕಾರಣದಿಂದಾಗಿ ಇಂಗಾಲದ ಡೈಆಕ್ಸೈಡ್ ಹೀರುವಿಕೆ ಹೆಚ್ಚಾಗಿರುವುದರಿಂದ ಸಾಗರ ಆಮ್ಲೀಕರಣವಾಗುತ್ತದೆ.

ಇದು ಸಮುದ್ರ ಜೀವಿಗಳ ಮೇಲೆ ವಿಶೇಷವಾಗಿ ಅಕಶೇರುಕ ಜೀವಿಗಳು ಅಂದರೆ ಹವಳದ ದಿಣ್ಣೆಗಳು, ಚಿಪ್ಪು ಮೀನುಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ವನ್ಯ ಪ್ರಾಣಿಗಳ ಹೆಚ್ಚುವರಿಯಾಗಿ ಆವಾಸ ಸ್ಥಾನಗಳು ಕಣ್ಮರೆಯಾಗುತ್ತಿವೆ. ಪರಿಸರ ಮಾಲಿನ್ಯವು ಪ್ರಾಣಿಗಳ ಜನಸಂಖ್ಯೆಯ ಕುಸಿತಕ್ಕೆ ಹಾಗೂ ಅವುಗಳ ಅವನತಿಗೆ ಕಾರಣವಾಗುತ್ತಿದೆ. ಕೆಲವು ಪ್ರಭೇದಗಳ ಅಧಿಕ ಸಂಖ್ಯೆ ಹಾಗೂ ಇನ್ನೂ ಕೆಲವು ಪ್ರಭೇದಗಳ ಕಡಿಮೆ ಸಂಖ್ಯೆ ಪರಿಸರ ವ್ಯವಸ್ಥೆಯನ್ನು ಅಸ್ಥಿರಗೊಳಿಸುತ್ತಿದೆ. ಕಾಡುಗಳು ಮರೆಯಾಗಿ ಕೃಷಿ ಭೂಮಿ ಗಳಾಗಿ ಮಾರ್ಪಡುತ್ತಿವೆ. ಕೃಷಿ ಭೂಮಿಗಳಲ್ಲಿ ಸಾಂಪ್ರದಾಯಿಕ ಬೆಳೆಗಳಿಗಿಂತ ವಾಣಿಜ್ಯ ಬೆಳೆಗಳನ್ನು ಬೆಳೆಯುವುದರ ಮೂಲಕ ಹೆಚ್ಚು ಹೆಚ್ಚು ರಾಸಾಯನಿಕಗಳನ್ನು ಬಳಸುವುದರ ಮೂಲಕ ಪರಿಸರ ವ್ಯವಸ್ಥೆಯ ಜಾಲಕೊಂಡಿಯು ಮುರಿಯುತ್ತಿದೆ. ಸೇವಿಸುವ ಆಹಾರ ವಿಷಕಾರಿಯಾಗಿದೆ.

ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆ ಮಾಡುವುದರ ಮೂಲಕ ಜೀವವೈವಿಧ್ಯತೆಯನ್ನು ಉಳಿಸಬೇಕಾಗಿದೆ. ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಮಿತಗೊಳಿಸುವಿಕೆ. ಪ್ಲಾಸ್ಟಿಕ್ ವಸ್ತುಗಳ ಮರುಬಳಕೆ, ಮರು ಚಕ್ರೀಕರಣ ದಂತಹ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಪ್ಲಾಸ್ಟಿಕ್ ಪ್ರಮಾಣವನ್ನು ಕಡಿಮೆ ಮಾಡಿ, ಪ್ರತಿಯೊಬ್ಬರೂ ಪ್ರಜ್ಞಾಪೂರ್ವಕವಾಗಿ ಭೂಮಿಯನ್ನು ಕಾಪಾಡಬೇಕಾಗಿದೆ. ಇದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಜೀವಸಂಕುಲವೂ ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ.

– ಶಾಂತಲಾ ಹಂಚಿನಾಳ.

ಜೆಟಿವಿಪಿ ಬಾಲಕಿಯರ ಪ್ರೌಢಶಾಲೆ, ಡಂಬಳ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!