ವಿಜಯಸಾಕ್ಷಿ ಸುದ್ದಿ, ಗದಗ: ವೇಗವಾಗಿ ಸಾಗುವ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಕರ್ನಾಟಕ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.
ನಗರದ ಕೆ.ಎಚ್. ಪಾಟೀಲ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಶುಕ್ರವಾರ ಅಪ್ರೆಂಟಿಸ್ ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೇಮಕಾತಿ ಆದೇಶವನ್ನು ವಿತರಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೇರೆ ಸ್ಥಳಗಳಿಗೆ ಹೋದಾಗ ಊಟ ಸರಿಯಿಲ್ಲವೆಂದೋ, ತಂದೆ-ತಾಯಿಯವರನ್ನು ಬಿಟ್ಟು ಇರಬೇಕೆಂಬ ನೆಪ ಒಡ್ಡಿ ಸಿಕ್ಕ ಅವಕಾಶವನ್ನು ತೊರೆದ ಹಲವು ಪ್ರಸಂಗಗಳಿವೆ. ಹಾಗಾಗಿ ವಿದ್ಯಾರ್ಥಿಗಳು ಕೆಲಸ ಸಿಕ್ಕ ಮೊದಲ ದಿನಗಳಲ್ಲಿ ಎದುರಾಗುವ ಕಷ್ಟಗಳನ್ನು ಸಹಿಸಿಕೊಳ್ಳಬೇಕು. ಅಂದಾಗ ಅಭ್ಯರ್ಥಿಗಳಿಗೆ ಕಂಪನಿಗಳಿಂದ ಉತ್ತಮ ಅವಕಾಶಗಳು ಒದಗಿಬರುತ್ತವೆ ಎಂದರು.
ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಸೇರಿದಾಗ ಉತ್ಪಾದನೆ ಮತ್ತು ಕಂಪನಿಯಲ್ಲಿ ಕಾರ್ಯನಿರ್ವಹಿಸಬೇಕಾದ ಕೌಶಲ್ಯಗಳ ಅಭಿವೃದ್ಧಿ ಜೊತೆಗೆ ಒಟ್ಟಾರೆ ಕಂಪನಿ ಯಾವ ರೀತಿ ನಿರ್ವಹಣೆಗೊಳ್ಳುತ್ತದೆ ಎಂಬುದರ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕು. ಕಲಿತ ಕೌಶಲ್ಯವನ್ನು ಕಾಲಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಿಕೊಳ್ಳಬೇಕು ಮತ್ತು ಉತ್ತಮ ಸಂಭಾಷಣಾ ಕೌಶಲ್ಯವನ್ನು ಹೊಂದಬೇಕು ಎಂದು ನುಡಿದರು.
ಸರ್ಕಾರಿ ಐಟಿಐ ಕಾಲೇಜಿನಲ್ಲಿ ಕಲಿತ 2000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ದೊಡ್ಡ ಖಾಸಗಿ ಸಂಸ್ಥೆಯಲ್ಲಿ 20 ಸಾವಿರ ಸಂಬಳವನ್ನು ಕೊಡುತ್ತಾರೆ. ಕಲಿಯುವ ವಯಸ್ಸಿನಲ್ಲಿ ಯುವಕರು ಕಷ್ಟಪಟ್ಟು, ಶ್ರದ್ಧೆಯಿಂದ ಕಲಿಯಬೇಕು. ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೆ.ಎಚ್. ಪಾಟೀಲ ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಬಸವರಾಜ ಮಲ್ಲೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೌಶಲ್ಯಾಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ಬಸವಪ್ರಭು ಹಿರೇಮಠ ಸೇರಿದಂಯೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಗದಗ ತಾಲೂಕಾ ಗ್ಯಾರಂಟಿ ಸಮಿತಿ ಸದಸ್ಯ ಕೃಷ್ಣಗೌಡ ಪಾಟೀಲ ಮಾತನಾಡಿ, ಅಪ್ರೆಂಟಿಸ್ ಪ್ರಕ್ರಿಯೆಯಲ್ಲಿ 290ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ 170 ಜನ ಆಯ್ಕೆಯಾಗಿರುವುದು ಸಂತೋಷ ತಂದಿದೆ. ಯುವಕರು ತಮಗೆ ಆಸಕ್ತಿಯಿರುವ ಯಾವುದೇ ಕೌಶಲ್ಯ ಅಭಿವೃದ್ಧಿಯ ಪ್ರಕ್ರಿಯೆಯನ್ನು ನಿರಂತರವಾಗಿ ಮಾಡುತ್ತಿರಬೇಕು. ಕೆಲಸದ ಪ್ರಾರಂಭದಲ್ಲಿ ಕಡಿಮೆ ಸಂಬಳ ಸಿಗುವ ಕಾರಣವೊಡ್ಡಿ ಕಲಿಕೆಯನ್ನು ಬಿಡಬಾರದು. ಇಂದಿನ ದಿನಮಾನದಲ್ಲಿ ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ನವ ಯುಗಕ್ಕೆ ತಕ್ಕಂತೆ ನಮ್ಮ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.