ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಲಕ್ಷ್ಮೇಶ್ವರ ತಾಲೂಕು ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಸ್.ಎಫ್. ಆದಿ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕನ್ನಡ ನಾಡು-ನುಡಿಯ ಬಗ್ಗೆ ಎಲ್ಲರೂ ಹೆಮ್ಮೆ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ನಮ್ಮ ಹೃದಯಭಾಷೆಯಾಗಿರಲಿ; ತೋರಿಕೆಗಾಗಿ ಕನ್ನಡದ ಅಭಿಮಾನ ಬೇಡ. ಕನ್ನಡಕ್ಕೆ ಅಪಾರ ಮಹತ್ವವಿದ್ದು, ಅನೇಕ ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡ ಸಾಹಿತಿಗಳು ಪಡೆದುಕೊಂಡಿದ್ದಾರೆ. ಅನೇಕ ಮಹನೀಯರು ಕನ್ನಡ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಕನ್ನಡ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪಣತೊಡಬೇಕು,” ಎಂದು ಹೇಳಿದರು.
ಕರವೇ ತಾಲೂಕಾಧ್ಯಕ್ಷ ಲೋಕೇಶ ಸುತಾರ ಮಾತನಾಡಿ, “ಕನ್ನಡ ರಕ್ಷಣಾ ವೇದಿಕೆಯವರು ಕನ್ನಡ, ನಾಡು-ನುಡಿ, ಜಲ-ನೆಲಕ್ಕಾಗಿ ಸದಾ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ನಮ್ಮವರೇ ಶತ್ರುಗಳಾಗಿ ಪರಿಣಮಿಸುತ್ತಿದ್ದಾರೆ. ಇಂಗ್ಲಿಷ್ ವ್ಯಾಮೋಹದಿಂದ ಕನ್ನಡವನ್ನು ಮರೆತಿರುವುದು ನೋವುಂಟುಮಾಡುವ ವಿಷಯ. ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮನಾಗಿದ್ದು, ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಿ ಜಾರಿಗೆ ಬರಬೇಕೆನ್ನುವದು ಕರವೇ ಬೇಡಿಕೆಯಾಗಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರವೀಣ ಗಾಣಿಗೇರ, ಗಂಗಾಧರ ಕರ್ಜೆಕಣ್ಣವರ, ಈರಣ್ಣ ಶಿಗ್ಲಿ, ಅರುಣ ಮೆಕ್ಕಿ, ಗಂಗಾಧರ ಕೊಂಚಿಗೇರಿಮಠ, ಆದೇಶ ಸವಣೂರ, ಆಶೀಪ್ ಗುತ್ತಲ್, ಜಾಹೀರ್ ಮೊಮಿನ್, ವೀರೇಶ ಸಾಸಲವಾಡ, ಕುಮಾರ ಕಣವಿ, ಪ್ರವೀಣ ಮುದಗಲ್, ವುಳವೇಶ ಪಾಟೀಲ, ವಿನಯ ಹಿರೇಮಠ, ಸಾವಿತ್ರಿ ಅತ್ತಿಗೇರಿ, ವಿಜಯಕುಮಾರ ಮುಂತಾದವರು ಉಪಸ್ಥಿತರಿದ್ದರು.


