ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಡಿ. 11ರಂದು ಸಂಜೆ 5.30ಕ್ಕೆ ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಬೀಚಿಯವರ 13ನೇ ಸ್ಮರಣೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಬೀಚಿ ಬಳಗದ ನೂತನ ಅಧ್ಯಕ್ಷ ಶಿವಯೋಗಿ ಜಕ್ಕಲಿ ಮತ್ತು ಸಂಚಾಲಕ ಜೆ.ಎ. ಪಾಟೀಲ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನರೇಗಲ್ಲದಲ್ಲಿ ಬೀಚಿ ಬಳಗವು 2013ರ ಡಿ. 7ರಂದು ಪ್ರಾರಂಭಗೊಂಡಿದ್ದು, ಅಂದಿನಿಂದ ಅವರ ಸ್ಮರಣೋತ್ಸವವನ್ನು ಆಚರಿಸುತ್ತ ಬರಲಾಗುತ್ತಿದೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ನಡೆಯುವ ಈ ಬೀಚಿ ಸ್ಮರಣೋತ್ಸವಕ್ಕೆ ಬೀಚಿಯವರ ಶಿಷ್ಯರೂ, ಬೀಚಿ ಸಾಹಿತ್ಯದ ಪರಿಚಾರಕರೂ, ಅಂತಾರಾಷ್ಟ್ರಿಯ ಖ್ಯಾತಿಯ ಹಾಸ್ಯ ದಿಗ್ಗಜರೂ ಆಗಿರುವ ಗಂಗಾವತಿಯ ಪ್ರಾಣೇಶ್‌ರವರು ತಮ್ಮ ತಂಡದೊಂದಿಗೆ ಬಂದು ಸ್ಮರಣೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅದರಂತೆ ಇದೇ ಡಿ. 11ರಂದು ಜರುಗುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹಾಲಕೆರೆ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ವಹಿಸಲಿದ್ದು, ನೇತೃತ್ವವನ್ನು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ವಹಿಸಲಿದ್ದಾರೆ. ರೋಣ ಶಾಸಕ ಮತ್ತು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಾಣೇಶ್‌ರೊಂದಿಗೆ ಖ್ಯಾತ ನಗೆ ಭಾಷಣಕಾರರಾದ ಬಸವರಾಜ ಮಹಾಮನಿ, ನರಸಿಂಹ ಜೋಷಿ, ಅನಿಲ ವೈದ್ಯ ಪಾಲ್ಗೊಂಡು ನಗೆಯ ರಸದೂಟವನ್ನು ನರೇಗಲ್ಲ ಮತ್ತು ಸುತ್ತಲಿನ ಗ್ರಾಮಗಳ ಜನತೆಗೆ ಉಣಬಡಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸೂಡಿಯ ಶ್ರೀ ಚಿದಂಬರೇಶ್ವರ ದೇವಸ್ಥಾನದಿಂದ ಧರ್ಮ ರತ್ನಾಕರ ಪ್ರಶಸ್ತಿ ಪುರಸ್ಕೃತರು, ನರೇಗಲ್ಲದ ಖ್ಯಾತ ವೈದ್ಯರೂ ಆಗಿರುವ ಡಾ. ಗಜಾನನ ಕಾಳೆ, ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಭುಸ್ವಾಮಿ ಅರವಟಗಿಮಠ, ಜಿಲ್ಲಾ ಕಾರ್ಯಕಾರಿಣಿಗೆ ಆಯ್ಕೆಯಾದ ನಿಂಗರಾಜ ಬೇವಿನಕಟ್ಟಿ, ಆದರ್ಶ ಕುಲಕರ್ಣಿ ಹಾಗೂ ಕಾನೂನು ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರ‍್ಯಾಂಕ್ ಗಳಿಸಿದ ವಿದ್ಯಾಶ್ರೀ ಬೇವಿನಕಟ್ಟಿಯವರನ್ನು ಬಳಗದಿಂದ ಆತ್ಮೀಯವಾಗಿ ಸನ್ಮಾನಿಸಲಾಗುವದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



