ಮಾರನಬಸರಿ ಗ್ರಾಮದ ಜಮೀನಿನಲ್ಲಿ ಕರಡಿ ಹೆಜ್ಜೆ: ಡ್ರೋನ್ ಮೂಲಕ ಪತ್ತೆ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಇಲ್ಲಿನ ಮಾರನಬಸರಿ ಗ್ರಾಮದಲ್ಲಿ 15 ವರ್ಷಗಳ ನಂತರ ಕರಡಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. 15 ವರ್ಷಗಳ ಹಿಂದೆ ಗ್ರಾಮದ ಇಮಾಮಸಾಬ ವಾರಿಕಲ್ ಎಂಬುವರ ಮೇಲೆ ಕರಡಿ ದಾಳಿ ನಡೆಸಿ, ಬಸವರಾಜ ಜಾಳಿಹಾಳ ಎಂಬುವರ ಮನೆಗೆ ನುಗ್ಗಿ ಸೆರೆ ಸಿಕ್ಕಿತ್ತು. ಈಗ ಮತ್ತೆ ಮಕ್ತುಂಸಾಬ ಸಿದ್ದಿ ಎಂಬುವರ ಜಮೀನಲ್ಲಿ ಕರಡಿ ಕಾಣಿಸಿಕೊಂಡಿದೆ.

Advertisement

ಮಾರನಬಸರಿ ಗ್ರಾಮದಲ್ಲಿ ಆಗಾಗ ಕಾಡು ಪ್ರಾಣಿಗಳು ಕಾಣಸಿಗುತ್ತವೆ. ಅಲ್ಲದೆ ಇತ್ತೀಚೆಗೆ ದೇಶ ವಿದೇಶದ ಪಕ್ಷಿಗಳು ಸಹ ಗ್ರಾಮದತ್ತ ಬರುತ್ತಿವೆ. ಅಲ್ಲದೆ ನೀರು ನಾಯಿ, ಮುಳ್ಳು ಹಂದಿ, ತೋಳ, ನರಿ, ಕತ್ತೆ ಕಿರುಬ ಸೇರಿದಂತೆ ಅನೇಕ ಪ್ರಾಣಿಗಳು ಗ್ರಾಮದ ಹಳ್ಳದಲ್ಲಿ ಆಗಾಗ ಕಂಡು ಬರುತ್ತವೆ. ವಿಪರ್ಯಾಸವೆಂದರೆ, ಕರಡಿ ಮಾತ್ರ 15 ವರ್ಷಗಳ ನಂತರ ಗ್ರಾಮದತ್ತ ಮುಖ ಮಾಡಿದ್ದು, ಸಹಜವಾಗಿ ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ.

ಮಂಗಳವಾರ ಬೆಳಗಿನ ಜಾವ ಹಳ್ಳದ ಪಕ್ಕ ನರೇಗಲ್ಲ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮಕ್ತುಂಸಾಬ ಸಿದ್ದಿ ಎಂಬುವರ ಜಮೀನಿನಲ್ಲಿ ಕರಡಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಜಮೀನುಗಳಲ್ಲಿ ಮೂಡಿರುವ ಹೆಜ್ಜೆ ಗುರುತುಗಳು ಕರಡಿಯದ್ದು ಎಂದು ಖಚಿತಪಡಿಸಿಕೊಂಡ ಅಧಿಕಾರಿಗಳು ಕರಡಿಯ ಪತ್ತೆಗಾಗಿ ಡ್ರೋನ್ ಮೂಲಕ ವಿಷೇಷ ಕಾರ್ಯಾಚರಣೆ ನಡೆಸಿದ್ದು, ಕರಡಿ ಮಾತ್ರ ಪತ್ತೆಯಾಗಿಲ್ಲ.

ಮಾರನಬಸರಿ ಗ್ರಾಮದ ಹಳ್ಳ ಕಾಡು ಪ್ರಾಣಿಗಳಿಗೆ ರಕ್ಷಣೆ ನೀಡುವ ಸ್ಥಳವಾಗಿದೆ. ಅನೇಕ ವರ್ಷಗಳಿಂದ ಗ್ರಾಮದ ಹಳ್ಳದಲ್ಲಿರುವ ಜಾಲಿ ಕಂಟಿಗಳನ್ನು ತೆರವುಗೊಳಿಸದೆ ಹಾಗೇ ಬಿಟ್ಟಿರುವುದು ಒಂದು ಕಡೆಯಾದರೆ, ಗ್ರಾಮದ ಹಳ್ಳವು ಕೊಪ್ಪಳ ಜಿಲ್ಲೆ ಸೇರಿ ಇತ್ತ ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಬೇಲೂರ ಹಳ್ಳದವರೆಗೆ ತನ್ನ ಹರಿವು ಹೊಂದಿರುವ ಪರಿಣಾಮ ಕಾಡು ಪ್ರಾಣಿಗಳು ಹಳ್ಳದ ಮೂಲಕ ಆಗಮಿಸಿ ಇಲ್ಲಿ ತಂಗುತ್ತವೆ ಎನ್ನಲಾಗಿದೆ.

ಅರಣ್ಯಾಧಿಕಾರಿಗಳು ಹಳ್ಳದ ಹರಿವಿನ ಮಾರ್ಗದಲ್ಲಿ ಡ್ರೋನ್ ಕಾರ್ಯಾಚರಣೆ ನಡೆಸಿದರೂ, ಮಳೆಯ ಕಾರಣಕ್ಕೆ ಹುಡುಕಾಟವನ್ನು ಕೈಬಿಡಬೇಕಾಯಿತು. ಕರಡಿ ಪತ್ತೆಯಾಗಿ ಸೆರೆ ಸಿಕ್ಕುವವರೆಗೂ ಗ್ರಾಮಸ್ಥರಲ್ಲಿ ಆತಂಕ ದೂರವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಮಾರನಬಸರಿ ಗ್ರಾಮದ ಜಮೀನಿನಲ್ಲಿ ಮೂಡಿರುವ ಹೆಜ್ಜೆ ಗುರುತುಗಳು ಕರಡಿಯದು ಎನ್ನುವುದು ಖಚಿತ. ಡ್ರೋನ್ ಮೂಲಕ ಪತ್ತೆ ಕಾರ್ಯಾಚರಣೆ ನಡೆಸಲಾಗದ್ದು, ಮಳೆಯ ಕಾರಣ ಕಾರ್ಯಾಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಡಂಗುರ ಸಾರಲಾಗಿದೆ. ಮಳೆ ಕಡಿಮೆಯಾದ ತಕ್ಷಣ ಪುನಃ ಪತ್ತೆ ಕಾರ್ಯ ನಡೆಸಲಿದ್ದೇವೆ”

– ವಿರೇಂದ್ರ ಎಂ.

ಆರ್‌ಎಫ್‌ಓ, ರೋಣ.


Spread the love

LEAVE A REPLY

Please enter your comment!
Please enter your name here