ವಿಜಯಸಾಕ್ಷಿ ಸುದ್ದಿ, ರೋಣ: ಮಾರನಬಸರಿ ಗ್ರಾಮದಲ್ಲಿ ಮಂಗಳವಾರ ಕಾಣಿಸಿಕೊಂಡಿದ್ದ ಕರಡಿ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದು, ಸತತ ಸುರಿಯುತ್ತಿರುವ ಮಳೆಯಿಂದ ಬುಧವಾರ ಸಹ ಡ್ರೋನ್ ಹಾರಾಟವನ್ನು ಸ್ಥಗಿತಗೊಳಿಸಲಾಯಿತು.
ಅರಣ್ಯಾಧಿಕಾರಿ ಅನ್ವರ ಕೋಲಾರ ನೇತೃತ್ವದ ತಂಡ ಮಾರನಬಸರಿ, ಜಕ್ಕಲಿ, ಹೊಸಳ್ಳಿ ಗ್ರಾಮಗಳ ಸರಹದ್ದಿನ ಹಳ್ಳಗಳಲ್ಲಿ ಶೋಧ ಕಾರ್ಯ ನಡೆಸಿದರೂ ಕರಡಿ ಇರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿಲ್ಲ. ಬಿಡದೇ ಸುರಿಯುತ್ತಿರುವ ಮಳೆಯಿಂದ ಕರಡಿ ಹೆಜ್ಜೆ ಗುರುತುಗಳೂ ಸಹ ಕಾಣದಾಗಿದ್ದು, ಕರಡಿ ಹುಡುಕುವ ಕಾರ್ಯಕ್ಕೆ ತೊಡಕಾಗಿದೆ.
ಮಾರನಬಸರಿ ಗ್ರಾಮದಿಂದ ನರೇಗಲ್ಲ ಸಂಪರ್ಕ ಕಲ್ಪಿಸುವ ಮಧ್ಯದಲ್ಲಿ ಬರುವ ಹಳ್ಳದ ಎಡ ಭಾಗದಲ್ಲಿ ಕಲ್ಲು ಬಂಡೆಗಳು ಮತ್ತು ದಟ್ಟವಾದ ಮುಳ್ಳಿನ ಕಂಟಿಗಳು ಬೆಳೆದು ನಿಂತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಇದೇ ಸ್ಥಳದಲ್ಲಿ ಸತತ ಮೂರು ಗಂಟೆಗಳ ಕಾಲ ಕರಡಿಗಾಗಿ ಹುಡುಕಾಟ ನಡೆಸಿದರು. ಈ ಹಿಂದೆ ಇದೇ ಸ್ಥಳದಲ್ಲಿ ಚಿರತೆ ಕಾಣಿಸಿಕೊಂಡು, ಗಜೇಂದ್ರಗಡ ಭಾಗದ ಬೆಟ್ಟದಲ್ಲಿ ಸೆರೆ ಸಿಕ್ಕಿತ್ತು ಎನ್ನುವುದು ಗಮನಾರ್ಹ.
ಸತತವಾಗಿ ಮಳೆ ಸುರಿಯುತ್ತಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದೇವೆ. ನಿರಂತರ ಮಳೆಯಿಂದ ಹೆಜ್ಜೆ ಗುರುತುಗಳ ಬಗ್ಗೆ ಮಾಹಿತಿ ಸಿಗುತ್ತಿಲ್ಲ ಎಂದು ರೋಣ ಅರಣ್ಯಾಧಿಕಾರಿ ಅನ್ವರ ಕೋಲಾರ ಪ್ರತಿಕ್ರಿಯಿಸಿದ್ದಾರೆ.