ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮನುಷ್ಯ ಮನದಲ್ಲಿ ದುಃಖ ಹೊಂದಿದರೆ ಅವನು ಮಾನಸಿಕವಾಗಿ ಜರ್ಜರಿತನಾಗುತ್ತಾನೆ. ಆದ್ದರಿಂದ ನಿಮ್ಮ ಮನಸ್ಸಿನಿಂದ ದುಃಖ, ಕೋಪವನ್ನು ಹೊಡೆದೋಡಿಸಿ ಎಂದಿಗೂ ಸಂತಸದಿಂದಿರಿ ಎಂದು ನರೇಗಲ್ಲ ಹಿರೇಮಠದ ಷ.ಬ್ರ.ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ನರೇಗಲ್ಲ ಹಿರೇಮಠದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ನ ಪ್ರಗತಿಬಂಧು, ಸ್ವ-ಸಹಾಯ ಸಂಘಗಳ ಒಕ್ಕೂಟ ನರೇಗಲ್ಲ ವಲಯ ಇವರ ಸಹಯೋಗದಲ್ಲಿ ಜರುಗಿದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಮತ್ತು ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮನುಷ್ಯನಲ್ಲಿ ದುರ್ಗುಣಗಳಿದ್ದರೆ ಆತ ಕೆಟ್ಟ ಕೆಲಸಗಳನ್ನು ಮಾಡಿ ದುಃಖಿಯಾಗುತ್ತಾನೆ. ಇದರಿಂದ ಆತ ತನ್ನ ಕುಟುಂಬದ ಪರಿಸರವನ್ನೇ ಹಾಳು ಮಾಡುತ್ತಾನೆ. ದುಃಖದಿಂದ ಕ್ರೋಧ ಉಂಟಾಗುತ್ತದೆ. ಇದು ಮುಂದಿನ ಎಲ್ಲ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಎಂದಿಗೂ ಕೋಪಿಷ್ಠರಾಗದೆ ಶಾಂತಿ, ಸಮಾಧಾನದಿಂದ ಇರುವುದನ್ನು ರೂಢಿಸಿಕೊಳ್ಳಬೇಕೆಂದರು.
ಉಪನ್ಯಾಸ ನೀಡಿದ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸವಿತಕ್ಕ ಮಾತನಾಡಿ, ಮರಣದ ನಂತರ ಸ್ವರ್ಗಕ್ಕೋ, ನರಕಕ್ಕೋ ಎಂಬುದಕ್ಕಿಂತ ಬದುಕಿರುವಾಗಲೇ ಸ್ವರ್ಗವನ್ನು ನೋಡಬೇಕೆಂದರೆ ಧರ್ಮ ಮಾರ್ಗದಲ್ಲಿ ಜೀವನ ನಡೆಸಬೇಕೆಂದರು.
ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ, ಎಮ್.ಎಸ್. ದಢೇಸೂರಮಠ, ಕರವೇ ಅಧ್ಯಕ್ಷ ಹನುಮಂತ ಅಬ್ಬಿಗೇರಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ.ಪಂ ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಅಧ್ಯಕ್ಷತೆ ವಹಿಸಿದ್ದರು. ಜಗದೀಶ ಕರಡಿ, ಅಂದಪ್ಪ ವೀರಾಪೂರ, ಶಿಕ್ಷಕ ಸುರೇಶ ಹಳ್ಳಿಕೇರಿ, ಶಿವಯೋಗಿ ಜಕ್ಕಲಿ, ಈಶ್ವರ ಬೆಟಗೇರಿ ಉಪಸ್ಥಿತರಿದ್ದರು.
ರೋಣ ತಾಲೂಕಾ ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ ಸ್ವಾಗತಿಸಿದರು. ಹಾಲೇಶ ನಿರೂಪಿಸಿದರು. ಸುಮಾ ಹಿರೇಮಠ ವಂದಿಸಿದರು.
ಗದಗ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಮಹಿಳೆಯರನ್ನು ಧಾರ್ಮಿಕವಾಗಿ ಜಾಗೃತಿಗೊಳಿಸಲು ಹೆಗ್ಗಡೆಯವರು ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರೇರಣೆ ನೀಡುತ್ತಾರೆ. ಇಂದು ಸಹಸ್ರ ಬಿಲ್ವಾರ್ಚನೆಗೈದ ಸರ್ವರಿಗೂ ಶ್ರೀ ಮಂಜುನಾಥಸ್ವಾಮಿಯ ಆಶೀರ್ವಾದ ಇದ್ದೇ ಇರುತ್ತದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲ ಉದ್ದೇಶ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಾಗಿದೆ ಎಂದರು.



