
ವಿಜಯಸಾಕ್ಷಿ ಸುದ್ದಿ, ಗದಗ: ಶಾಲೆ ಎನ್ನುವುದು ಕಲಿಕೆಯ ಸ್ಥಳ. ಶಾಲೆ ಸಮಾಜದ ಪ್ರತಿಬಿಂಬ. ಕಲಿಕೆ ಎನ್ನುವುದು ಅಕ್ಷರ ಜ್ಞಾನಕ್ಕಷ್ಟೇ ಸೀಮಿತವಾಗಿಲ್ಲ. ಮೌಲ್ಯ ಹಾಗೂ ಉತ್ತಮ ಭಾವನೆಗಳನ್ನು ಬೆಳೆಸಿಕೊಳ್ಳುವ ಒಂದು ಸೂಕ್ತ ವೇದಿಕೆ. ಪ್ರತಿಯೊಂದು ಮಗು ಮೌಲ್ಯಯುತರಾಗಿ ರೂಪುಗೊಳ್ಳಲು ಶಾಲೆಯು ಸಹಕಾರಿ ಎಂದು ಡಾ. ಪ್ರೇಮಲತಾ ಹಿರೇಮಠ ಹೇಳಿದರು.
ಅವರು ಗದುಗಿನ ಸರ್ಕಾರಿ ಶಾಲೆಗಳಾದ ಮೌಲಾನ ಅಜಾದ್ ಮಾದರಿ ಶಾಲೆ, ಸರ್ಕಾರಿ ಕನ್ನೆ ಶಾಲೆ ನಂ.6 ಹಾಗೂ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ನಂ.3ರ ವಿದ್ಯಾರ್ಥಿಗಳಿಗೆ ಗದಗ ಜಿಲ್ಲಾ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ `ಅಮೃತ ಭೋಜನ ಜ್ಞಾನ ಸಿಂಚನ ಮಾಲಿಕೆ-7’ರಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿದರು.
ಶಾಲೆಯಲ್ಲಿ ಮಕ್ಕಳು ಸಮಾನವಾದ ಅವಕಾಶ ಪಡೆದು ಜ್ಞಾನವಂತರಾಗಬೇಕು. ಸರ್ಕಾರಿ ಶಾಲೆಗಳು ಮಕ್ಕಳಿಗೆ ಬದುಕಿನ ಆಗು-ಹೋಗುಗಳಿಗೆ ಉತ್ತರಗಳನ್ನು ಹೇಳಿಕೊಡುತ್ತವೆ. ಮಕ್ಕಳ ಮಾತನ್ನು ಆಲಿಸುವ ಹಾಗೂ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಾವು ಅವಕಾಶ ಕಲ್ಪಿಸಬೇಕು. ಮಕ್ಕಳೊಂದಿಗೆ ನಡೆಸುವ ಎಲ್ಲ ಸಂವಹನವು ಮಕ್ಕಳ ಸ್ನೇಹಿಯಾಗಿದ್ದು, ಅವರಿಂದ ಬರುವ ಅಭಿಪ್ರಾಯಗಳಿಗೆ ಆದ್ಯತೆ ನೀಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕ ಬಳಗ ಒತ್ತು ನೀಡಬೇಕು ಎಂದರು.
ಪ್ರಾಸ್ತಾವಿಕವಾಗಿ ಕವಿತಾ ಬೇಲೇರಿ ಮಾತನಾಡಿ, ಪ್ರತಿಯೊಂದು ಮಗುವು ಅನನ್ಯ. ಪ್ರತಿ ಮಗುವಿನ ಕಲಿಕೆ ವ್ಯಕ್ತಿಗತ, ವ್ಯಕ್ತಿಗತ ಕಲಿಕೆಯಲ್ಲಿ ಕಲಿಕೆಯ ರೀತಿ, ಶೈಲಿ, ಕಲಿಕಾ ವೇಗಾ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಭಿನ್ನವಾಗಿರುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಮಕ್ಕಳಿಗೆ ಸಂತಸದಾಯಕ ಕಲಿಕೆಯಲ್ಲಿ ತೊಡಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕದಳಿ ವೇದಿಕೆಯು ಪ್ರತಿವರ್ಷ ಶಾಲೆಗಳಲ್ಲಿ ಅಮೃತ ಭೋಜನ ಜ್ಞಾನಸಿಂಚನ ಕಾರ್ಯಕ್ರಮ ನಡೆಸುತ್ತಿರುವುದು ದಾನಿಗಳ ಸಹಕಾರದಿಂದ. ಇಂದು ಗದುಗಿನ ಖ್ಯಾತವೈದ್ಯರಾದ ಶರಣೆ ಡಾ. ರಾಧಿಕಾ ಉದಯ ಕುಲಕರ್ಣಿ ಹಾಗೂ ಶರಣೆ ಡಾ. ಪ್ರೇಮಲತಾ ಹಿರೇಮಠ ಇವರು ಮೂರು ಸರ್ಕಾರಿ ಶಾಲೆಗಳ ಮಕ್ಕಳಿಗೆ ಅಮೃತ ಭೋಜನ ಏರ್ಪಡಿಸಿ ಕಲಿಕಾ ಸಾಮಗ್ರಿ ವಿತರಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಎಂ.ಎA. ಜೋಗಿನ ಮಾತನಾಡಿ, ಶ್ರಾವಣದಲ್ಲಿ ಕದಳಿಶ್ರೀ ವೇದಿಕೆಯವರು ಶಾಲೆಗಳಲ್ಲಿ ವಿಶಿಷ್ಠ ಕಾರ್ಯಕ್ರಮ ಹಮ್ಮಿಕೊಂಡು ಶರಣರ ತತ್ವ ಹಾಗೂ ಸಿದ್ಧಾಂತಗಳನ್ನು ಮಕ್ಕಳಿಗೆ ತಲುಪಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಸಿಹಿ ಭೋಜನ, ಕಲಿಕಾ ಸಾಮಗ್ರಿ ವಿತರಣೆ, ಹಿರಿಯರ ಅನುಭವದ ಮಾತುಗಳು ಕಲಿಕೆಗೆ ಸ್ಫೂರ್ತಿ ನೀಡುತ್ತಿವೆ ಎಂದರು.
ಸಿದ್ದಮ್ಮ ಗೌಡರ, ಜ್ಯೋತಿ ಕಮದೊಡ ವಚನ ಪ್ರಾಚನ ಪ್ರಾರ್ಥನೆ ಮಾಡಿದರು. ಎಂ.ಎ. ಕಂದಗಲ್ ಸ್ವಾಗತಿಸಿದರು. ಸವಿತಾ ನಾಯಕ ನಿರೂಪಿಸಿದರು. ಸಹನಾ ನಿಡಗುಂದಿ ವಂದಿಸಿದರು. ಯಶವಂತ ಬೇವಿನಕಟ್ಟಿ, ಹನುಮಂತಪ್ಪ ಜೋರಾಳ, ಲಕ್ಷ್ಮೀ ಕುಪ್ಪರ, ಪದ್ಮಾ ಮಾನ್ವಿ, ರೇಣುಕಾ ಇಲಕಲ್, ರೇಖಾ ಮಣ್ವೊಡ್ಡರ, ಭವಾನಿ ನಾಯಕ, ಹಸೀನಾ ಹಳೆಮಸೂತಿ, ಅರ್ಪಿತಾ ಗಾಳಿ ಮುಂತಾದವರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾ. ದೀಪಾ ಹೂಗಾರ ಮಾತನಾಡಿ, ನಾವು ಮಕ್ಕಳಿಗೆ ಸ್ನೇಹಮಯ ವಾತಾವರಣ, ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಪರಿಸರ, ಕಾರ್ಯ ನಿರ್ವಹಣಾ ವಿಧಾನಗಳನ್ನು ತಿಳಿಸಬೇಕು. ಅರಿವು, ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನೆಗಳನ್ನು ಶಾಲಾ ಹಂತದಲ್ಲಿ ನಡೆಸುವುದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಸ್ಫೂರ್ತಿ ದೊರೆಯುತ್ತದೆ ಎಂದರು.