ದಾವಣಗೆರೆ: ತಾಲೂಕಿನ ಆನಗೋಡು ಸಮೀಪ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಸುಮಾರು 800ಕ್ಕೂ ಅಧಿಕ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ, ಕೆಲ ಯುವಕರು ಹೆಜ್ಜೇನು ಗೂಡಿಗೆ ಕಲ್ಲು ಹೊಡೆದ ಪರಿಣಾಮ ಏಕಾಏಕಿ ಜೇನು ಹುಳಗಳು ದಾಳಿ ನಡೆಸಿವೆ.
ದಾಳಿಯಿಂದ ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡಿದ್ದು, ಮಕ್ಕಳು, ಮಹಿಳೆಯರು ಸೇರಿದಂತೆ ಅನೇಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಹೆಜ್ಜೇನು ದಾಳಿಯ ತೀವ್ರತೆಯಿಂದ 80ಕ್ಕೂ ಹೆಚ್ಚು ಜನರಿಗೆ ತೊಂದರೆ ಉಂಟಾಗಿದ್ದು, ಸ್ಥಳೀಯರು ಒಣ ಹುಲ್ಲಿಗೆ ಬೆಂಕಿ ಹಚ್ಚಿ ಹೊಗೆ ಮೂಲಕ ಜೇನು ಹುಳಗಳನ್ನು ಓಡಿಸಿದ್ದಾರೆ. ಮಾಯಕೊಂಡ ಶಾಸಕ ಬಸವಂತಪ್ಪ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಚಿಕಿತ್ಸೆಗೆ ಸಹಕಾರ ನೀಡಿದ್ದಾರೆ.



