ಬೆಂಗಳೂರು,:- ಸಾಲ ನೀಡಿದ ಹಣ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿರುವ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾಲ ನೀಡಿದ್ದ ಸಗಾಯ್ ರಾಜ್ ಎಂಬವರನ್ನು ಆನಂದ್ ಕುಮಾರ್, ಆಶಿಷ್ ಮತ್ತು ಐಶ್ವರ್ಯಾ ಎಂಬವರು ಸೇರಿ ಅಪಹರಿಸಿರುವ ಆರೋಪ ಕೇಳಿಬಂದಿದೆ. ಸಗಾಯ್ ರಾಜ್ ಅವರು ಆನಂದ್ ಕುಮಾರ್‌ಗೆ ಸುಮಾರು ₹3 ಲಕ್ಷ ಹಣವನ್ನು ಸಹಾಯವಾಗಿ ನೀಡಿದ್ದರು. ಆನಂದ್ ತನ್ನ ತಂದೆಗೆ ಕಿಡ್ನಿ ಸಮಸ್ಯೆ ಇದೆ ಎಂದು ಹೇಳಿ ಹಣ ಪಡೆದಿದ್ದು, ಆ ಹಣವನ್ನು ತನ್ನ ಮಗಳು ಐಶ್ವರ್ಯಾ ಖಾತೆಗೆ ಜಮೆ ಮಾಡಿಸಿದ್ದ.
ಹಿಂದೆ ಮನೆ ಮಾರಾಟ ಮಾಡುವ ಮಾತು ನಡೆದಿದ್ದು, ಸುಮಾರು ₹1 ಕೋಟಿ ಹಣವನ್ನು ಸಗಾಯ್ ನೀಡಿದರೂ, ಮನೆ ನೋಂದಣಿ ಆಗದೆ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಅವರು ಹಣ ವಾಪಸ್ ಕೇಳಿದ್ದರು. ಇದೇ ಕಾರಣಕ್ಕೆ ಸಗಾಯ್ ರಾಜ್ ಅವರನ್ನು ಕಾರಿನಲ್ಲಿ ಹೋಗುತ್ತಿರುವಾಗ ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಲಾಗಿದೆ.
ಅಪಹರಣದ ನಂತರ ಅವರ ಮುಖಕ್ಕೆ ಬಟ್ಟೆ ಕಟ್ಟಲಾಗಿದ್ದು, ಕೈ ಕಾಲು ಕಟ್ಟಿ, ಸಿಗರೇಟ್‌ನಿಂದ ಸುಟ್ಟು, ಇಂಜೆಕ್ಷನ್ ಚುಚ್ಚುವ ಮೂಲಕ ಗಂಭೀರ ಚಿತ್ರಹಿಂಸೆ ನೀಡಲಾಗಿದೆ. ಇದನ್ನೆಲ್ಲಾ ವಿಡಿಯೋ ಮಾಡಿ ಬೆದರಿಕೆ ಹಾಕಲಾಗಿದೆ. ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿ ಹಿಂಸೆ ನೀಡಲಾಗಿದೆ.
ಬೆಳಿಗ್ಗೆ ಅವರು ‘ಕಾಪಾಡಿ’ ಎಂದು ಕೂಗಿದಾಗ ಸಾರ್ವಜನಿಕರು ನೆರವಿಗೆ ಧಾವಿಸಿ ಸಗಾಯ್ ಅವರನ್ನು ರಕ್ಷಿಸಿದ್ದಾರೆ. ನಂತರ ಅವರು ಸಂಚಾರ ಪೊಲೀಸರ ನೆರವಿನಿಂದ ಕೋರಮಂಗಲ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.