ಬೆಂಗಳೂರು: ಬೆಂಗಳೂರಿನಲ್ಲಿ ಭಿಕ್ಷಾಟನೆ ಹಿಂದೆ ದೊಡ್ಡ ಮಾಫಿಯಾ ಕಾರ್ಯನಿರ್ವಹಿಸುತ್ತಿದ್ದು, ಅದರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಡಾ. ಕೆ. ಗೋವಿಂದರಾಜು ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿಗೆ ಬಂದು 50 ವರ್ಷಗಳಾದರೂ ರಾಜ್ಯದಲ್ಲಿ ಭಿಕ್ಷಾಟನೆ ನಿಲ್ಲಿಲ್ಲ ಎಂದು ಹೇಳಿದರು. ಬೆಂಗಳೂರಿನ ಮಾರ್ಕೆಟ್ ಪ್ರದೇಶಗಳು, ಎಂ.ಜಿ.ರೋಡ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಭಿಕ್ಷಾಟನೆ ಹೆಚ್ಚಾಗಿದೆ ಎಂದು ಅವರು ಗಮನಕ್ಕೆ ತಂದರು.
ಭಿಕ್ಷಾಟನೆ ಹಿಂದೆ ಸಂಘಟಿತ ಮಾಫಿಯಾ ಕಾರ್ಯನಿರ್ವಹಿಸುತ್ತಿದ್ದು, ಏಜೆಂಟ್‌ಗಳು ಜನರನ್ನು ಕರೆದುಕೊಂಡು ಬಂದು ನಗರದಲ್ಲಿ ಬಿಟ್ಟು ಭಿಕ್ಷಾಟನೆ ಮಾಡಿಸುತ್ತಿದ್ದಾರೆ. ಚಿಕ್ಕ ಮಕ್ಕಳನ್ನೂ ಸಹ ಇದರಲ್ಲಿಗೆ ತಳ್ಳಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಈ ಸಮಸ್ಯೆ ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಭಿಕ್ಷಾಟನೆ ಹಿಂದೆ ಮಾಫಿಯಾ ಇರುವುದಾಗಿ ಮಾಹಿತಿ ದೊರೆತರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಭಿಕ್ಷಾಟನೆ ಮಾಡುತ್ತಿರುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈ ಸಂಬಂಧ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.



