ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ನವರಾತ್ರಿ ಸಂದರ್ಭದಲ್ಲಿ ದೇವಿಯ ಶಕ್ತಿಯ ಆರಾಧನೆಯಿಂದ ನಮ್ಮೆಲ್ಲರ ಸಂಕಲ್ಪಗಳು ಸಿದ್ಧಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿಯ ಗ್ರಾಮ ದೇವತೆ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಹಮ್ಮಿಕೊಂಡ ೪೬ನೇ ವರ್ಷದ ದೇವಿ ಪುರಾಣವನ್ನು ಘಟಸ್ಥಾಪನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷ ದೇವಿ ಪುರಾಣವನ್ನು ಆಲಿಸುತ್ತೇವೆ. ಅದರಲ್ಲಿಯ ತತ್ವದರ್ಶನಗಳನ್ನು ಅಳವಡಿಸಿಕೊಂಡು ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದರು.
ಗದಗ ವೀರೇಶ್ವರ ಪುಣ್ಯಶ್ರಮದ ವಿಶ್ವನಾಥ ಶಾಸ್ತ್ರಿಗಳು ಪುರಾಣ ಪ್ರವಚನವನ್ನು ಆರಂಭಿಸಿದರು. ಷಡಕ್ಷರಯ್ಯ ಬದ್ನಿಮಠ ಅವರು ೧ನೇ ಅಧ್ಯಾಯದ ಪಠಣವನ್ನು ಪ್ರಾರಂಭಿಸಿದರು. ಇವರಿಗೆ ಶಂಕರಪ್ಪ ಬಣವಿ, ಮಲ್ಲಪ್ಪ ಕಲ್ಲೂರ, ಬಸನಗೌಡ ಪಾಟೀಲ ಸಂಗೀತ ಸೇವೆ ನೀಡಿದರು. ಕುಬೇರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪುರಾಣ ಸಮಿತಿಯ ಅಧ್ಯಕ್ಷ ಪ್ರಕಾಶ ಅರಹುಣಸಿ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ಬಸವರಾಜ ಭೂಮಣ್ಣವರ, ಶ್ರಿಶೈಲಗೌಡ ಪಾಟೀಲ, ಚನ್ನಪ್ಪ ಬಣವಿ, ಚಂದ್ರು ಬಣವಿ, ಮಲ್ಲಪ್ಪ ಗುರಿಕಾರ ಇದ್ದರು.



