ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ತಾಲೂಕು ಕೇಂದ್ರದಿಂದ ಕೆಲವೇ ಕಿಮೀ.ಗಳ ಅಂತರದಲ್ಲಿರುವ ಕಡಕೋಳ ಗ್ರಾಮ ಪಂಚಾಯಿತಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ನೀಡಿದ ನಿಗದಿತ ಗುರಿ ತಲುಪುವಲ್ಲಿ ಹಿಂದೆಯೇ ಇದ್ದು, ಇಲ್ಲಿಯ ನರೇಗಾ ಕೆಲಸಗಳು ಚುರುಕು ಪಡೆದು ನೀಡಿದ ಗುರಿ ತಲುಪುವುದು ಯಾವಾಗ ಎಂಬ ಪ್ರಶ್ನೆ ಕಾಡುವಂತಾಗಿದೆ.
ಪ್ರಸಕ್ತ ಸಾಲಿನಲ್ಲಿ ಕಡಕೋಳ ಗ್ರಾ.ಪಂ ಕೂಲಿಕಾರ್ಮಿಕರಿಂದ 27169 ಮಾನವ ದಿನಗಳ ಟಾರ್ಗೆಟ್ ಹೊಂದಿದೆ. ಸೆ.23ಕ್ಕೆ ಶಿರಹಟ್ಟಿ ತಾ.ಪಂ ಸಹಾಯಕ ನಿರ್ದೇಶಕರು ನೀಡಿದ ಅಂಕಿ-ಅಂಶದ ಪ್ರಕಾರ, ಗ್ರಾ.ಪಂ ಇಲ್ಲಿಯವರೆಗೆ 18520 ಮಾನವ ದಿನಗಳ ಗುರಿ ತಲುಪಬೇಕಿತ್ತು. ಆದರೆ ಕೇವಲ 6434 ಮಾನವ ದಿನಗಳನ್ನು ಮಾತ್ರ ಪೂರೈಸಿದೆ.
ಗ್ರಾ.ಪಂ ವತಿಯಿಂದ 13 ಮನೆಗಳ ನಿರ್ಮಾಣದ ಕಾರ್ಯ ಹಾಗೂ 6 ದನದ ದೊಡ್ಡಿ ನಿರ್ಮಾಣ ಪ್ರಗತಿಯಲ್ಲಿದ್ದು, ಜಲ್ಲಿಗೇರಿ ಮೇನ್ ಗೇಟ್‌ನಿಂದ ರಂಗಮಂದಿರದವರೆಗೆ ಸಿಸಿ ರಸ್ತೆ, ಹಳೆ ಪ್ರಾಥಮಿಕ ಶಾಲೆಯಲ್ಲಿ ಆಟದ ಮೈದಾನ ಅಭಿವೃದ್ಧಿ, ಕೆಪಿಎಸ್‌ನಲ್ಲಿ ಶೌಚಾಲಯ, ಕಾಲೇಜು ಕಾಂಪೌಂಡ್ ನಿರ್ಮಾಣ ಪ್ರಗತಿಯಲ್ಲಿದ್ದಾಗ್ಯೂ ಗ್ರಾ.ಪಂಗೆ ಗುರಿ ತಲುಪಲು ಸಾಧ್ಯವಾಗಿಲ್ಲ. 15ನೇ ಹಣಕಾಸು ಯೋಜನೆಯಡಿ 10 ಕೆಲಸಗಳಲ್ಲಿ 2 ಪೂರ್ಣಗೊಂಡಿದ್ದು, ಇನ್ನೂ 8 ಪ್ರಗತಿಯಲ್ಲಿವೆ.
ಜೆಜೆಎಂ ಯೋಜನೆ ಮೂಲಕ ಮನೆ ಮನೆಗೆ ನೀರು ಸಂಪರ್ಕ ಕಲ್ಪಿಸುವ ಯೋಜನೆಯು ಕಡಕೋಳ ಗ್ರಾ.ಪಂ ಕೇಂದ್ರಸ್ಥಾನದಲ್ಲಿಯೇ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ಸಾರ್ವಜನಿಕರ ತೆರಿಗೆ ಹಣ, ಸರಕಾರದ ಸದುದ್ದೇಶ ಇಲ್ಲಿ ಈಡೇರದೇ ಕೇವಲ ಅಂಕಿ-ಅಂಶಗಳಿಗೆ ಮಾತ್ರ ಯೋಜನೆಗಳು ಸಿಮೀತವಾದಂತಿದೆ.
ನರೇಗಾ ಯೋಜನೆಯಡಿ ಕೂಲಿಕಾರ್ಮಿಕರ ಭಾಗವಹಿಸುವಕೆ, ಸರಕಾರದ ಸೌಲಭ್ಯಗಳು ಹೀಗೆ ಹತ್ತು ಹಲವು ಉಪಯುಕ್ತ ಮಾಹಿತಿಯನ್ನು ನೀಡಬೇಕಾದ ಸಿಬ್ಬಂದಿಗಳು ಗ್ರಾಮ ಪಂಚಾಯತ ಮಟ್ಟದಲ್ಲಿ ಸಮರ್ಪಕವಾಗಿ ಜಾಗೃತಿ ಮೂಡಿಸದೇ ಇರುವದರಿಂದ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಕಾಮಗಾರಿಯ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿಯ ಗ್ರಾ.ಪಂ ಸದಸ್ಯ ಮಾರ್ತಾಂಡಪ್ಪ ಹಾದಿಮನಿ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗ್ರಾ.ಪಂ ಪಿಡಿಓ ಎಸ್.ಟಿ. ಕಪ್ಪಲಿ, ಗ್ರಾ.ಪಂನಲ್ಲಿ 2024-25ನೇ ಸಾಲಿನ ಕೆಲಸಗಳು ಪ್ರಗತಿಯಲ್ಲಿ ಭಾಗಶಃ ತೃಪ್ತಿಕರವಾಗಿದೆ. ಈ ಬಗ್ಗೆ ಸಂಬಂಧಿಸಿದ ಆರ್‌ಡಬ್ಲ್ಯುಎಸ್ ಎಇಇಗೆ 2023ರ ಅ.10ರಂದೇ ಪತ್ರ ಬರೆಯಲಾಗಿದೆ ಎಂದರು.
ಗ್ರಾ.ಪಂ ಸದಸ್ಯ ಮಾತಾಂಡಪ್ಪ ಹಾದಿಮನಿ ಪ್ರತಿಕ್ರಿಯಿಸಿ, ಜಲ್ಲಿಗೇರಿ ಗ್ರಾಮಕ್ಕೆ ಒಂದೇ ಬೋರ್‌ವೆಲ್ ವ್ಯವಸ್ಥೆ ಇದ್ದು, ಇದು ದುರಸ್ತಿಗೆ ಬಂದರೆ ಜನತೆಗೆ ಕುಡಿಯುವ ನೀರಿನ ತೊಂದರೆಯಾಗುತ್ತದೆ. ನರೇಗಾ ಜಾಗೃತಿ ಗ್ರಾ.ಪಂ ಮಟ್ಟದಲ್ಲಿ ಅಷ್ಟಕ್ಕಷ್ಟೇ ಇದೆ. ಸಿಬ್ಬಂದಿಗಳ ಮುಖವನ್ನೇ ನಾವು ನೋಡಿಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳು ನಡೆಯುವಂತೆ ನಿರ್ದೆಶಿಸಬೇಕೆಂದರು.