ಬೆಳಗಾವಿ:- ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ನಲ್ಲಿ ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಕಂಟೇನರ್ಗಳನ್ನು ಹೈಜಾಕ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
2025ರ ಅಕ್ಟೋಬರ್ 16ರಂದು ನಡೆದ ಈ ದರೋಡೆ ಪ್ರಕರಣವು ಅಂತರರಾಜ್ಯ ಮಟ್ಟದ ಭಾರೀ ನಗದು ದರೋಡೆಯಾಗಿದ್ದು, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಪೊಲೀಸರನ್ನು ತೀವ್ರ ಅಚ್ಚರಿಗೆ ಗುರಿಮಾಡಿದೆ. ಮಹಾರಾಷ್ಟ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದ ಹಣ ಇದಾಗಿದ್ದು, ಅಪಾಯಕಾರಿ ಹಾಗೂ ಅರಣ್ಯ ಪ್ರದೇಶವಾದ ಚೋರ್ಲಾ ಘಾಟ್ ಮಾರ್ಗದಲ್ಲಿ ಕಂಟೇನರ್ಗಳು ಏಕಾಏಕಿ ನಾಪತ್ತೆಯಾಗಿದ್ದವು ಎಂಬುದು ತನಿಖೆಯಿಂದ ಗೊತ್ತಾಗಿದೆ.
ಈ ದರೋಡೆ ಪ್ರಕರಣ ಹಲವು ತಿಂಗಳುಗಳು ಗುಪ್ತವಾಗಿಯೇ ಉಳಿದಿದ್ದು, ನಾಸಿಕ್ ಮೂಲದ ಸಂದೀಪ್ ಪಾಟೀಲ ಎಂಬಾತನ ಅಪಹರಣ ಪ್ರಕರಣದ ದೂರಿನ ಮೂಲಕ ಸಂಪೂರ್ಣ ಬಹಿರಂಗವಾಗಿದೆ.
ಕಂಟೇನರ್ ಹೈಜಾಕ್ ಆದ ಕೆಲ ದಿನಗಳ ಬಳಿಕ, ಕಿಶೋರ್ ಶೇಟ್ ಅವರ ಸಹಚರರು ಸಂದೀಪ್ ಪಾಟೀಲನನ್ನು ಗನ್ ಪಾಯಿಂಟ್ನಲ್ಲಿ ಅಪಹರಿಸಿ, ಸುಮಾರು ಒಂದೂವರೆ ತಿಂಗಳ ಕಾಲ ಅಕ್ರಮ ಬಂಧನದಲ್ಲಿಟ್ಟು 400 ಕೋಟಿ ರೂ. ಹಣ ಕೊಡದಿದ್ದರೆ ಜೀವ ಉಳಿಯೋದಿಲ್ಲ ಎಂದು ಬೆದರಿಕೆ ಹಾಕಿ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಿದ್ದರು. ನಂತರ ಅಪಹರಣಕಾರರಿಂದ ತಪ್ಪಿಸಿಕೊಂಡ ಸಂದೀಪ್, 2026ರ ಜನವರಿ 1ರಂದು ನಾಸಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕವೇ ಈ ಭಾರೀ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.
ದೂರು ಆಧರಿಸಿ ತಕ್ಷಣ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು ಈವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಇಬ್ಬರು ಪ್ರಮುಖ ಆರೋಪಿಗಳು ಪರಾರಿಯಾಗಿದ್ದಾರೆ. ಅವರ ಬಂಧನದ ನಂತರವೇ ಕಂಟೇನರ್ಗಳು ಹಾಗೂ ನಗದು ಹಣ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಗಂಭೀರತೆಯನ್ನು ಗಮನಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವಿಶೇಷ ತನಿಖಾ ತಂಡ (SIT) ರಚಿಸುವಂತೆ ಆದೇಶಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಹಣ ಬಳಕೆಯಾಗಿದೆ ಎಂಬ ಅನುಮಾನವೂ ತನಿಖಾಧಿಕಾರಿಗಳಲ್ಲಿ ಮೂಡಿದ್ದು, ಈ ಪ್ರಕರಣ ರಾಜಕೀಯ ಹಾಗೂ ಆರ್ಥಿಕ ವಲಯಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.



