ಇಂದಿನಿಂದ ಬೆಳಗಾವಿ ಅಧಿವೇಶನ; “ಕೈ” ಸರ್ಕಾರ​ ಕಟ್ಟಿಹಾಕಲು ವಿಪಕ್ಷಗಳ ರಣತಂತ್ರ!

0
Spread the love

ಬೆಳಗಾವಿ:- ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ರಾಜ್ಯ ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭಗೊಳ್ಳಲಿದೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಕುರಿತು ಸಮರ್ಪಕ ಚರ್ಚೆ ನಡೆಯುವ ನಿರೀಕ್ಷೆ ಮೂಡಿದೆ. ಇದು ಬೆಳಗಾವಿಯಲ್ಲಿ ನಡೆಯುತ್ತಿರುವ 13ನೇ ಅಧಿವೇಶನ ಎನ್ನಲಾಗಿದೆ.

Advertisement

ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ವಿಪಕ್ಷ ಬಿಜೆಪಿ-ಜೆಡಿಎಸ್ ಸನ್ನದ್ಧತೆಯಲ್ಲಿದ್ರು, ಹೆಚ್​​ಡಿಕೆ, ಬೊಮ್ಮಾಯಿ, ಕಾರಜೋಳ ಸೇರಿ ಹಲವು ಸದನ ಶೂರರ ಕೊರತೆ ಕಾಡ್ತಿದೆ. ಆದ್ರೂ ಜಂಟಿ‌ ಹೋರಾಟದ ಮೂಲಕ ಆಡಳಿತ ಕಾಂಗ್ರೆಸ್ ವೈಫಲ್ಯಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಿವೆ.

ಬೈಎಲೆಕ್ಷನ್​ ಸೋತ ನಂತರ ಉಭಯ ಪಕ್ಷಗಳ ನಾಯಕರು ಮುಖಾಮುಖಿ ಆಗಿಲ್ಲ. ಈಗ ಬೆಳಗಾವಿ ಅಧಿವೇಶನ ಬಂದಿದೆ. ಸದನದ ಒಳಗೂ, ಹೊರಗೂ ಹೋರಾಟಕ್ಕೆ ಸಜ್ಜಾಗಬೇಕಿದ್ದ ಮೈತ್ರಿ ಪಡೆ, ಆ ಸೋಲಿನ ಮುಖಭಂಗದಿಂದ ಹೊರಗೇ ಬಂದಿಲ್ಲ. ಸದನದಲ್ಲಿ ಹೇಗೆ ಹೋರಾಟ ಮಾಡಬೇಕು? ಸರ್ಕಾರವನ್ನ ಹೇಗೆ ಕಟ್ಟಿಹಾಕ್ಬೇಕು. ಇದ್ಯಾವುದ್ರ ಬಗ್ಗೆ ತೀರ್ಮಾನಿಸಿಲ್ಲ. ಇಂಟ್ರಸ್ಟಿಂಗ್​ ಅಂದ್ರೆ ಸರ್ಕಾರ ​ ವಿರುದ್ಧ ಬೇಕಾದಷ್ಟು ಅಸ್ತ್ರಗಳಿವೆ.

ಸರ್ಕಾರ ವಿರುದ್ಧ ಮುಡಾ ಹಗರಣ ಇದೆ. ಈ ಸಂಬಂಧ ಇಡಿ, ಲೋಕಾಯುಕ್ತ ತನಿಖೆ ಆಗ್ತಿದೆ. ಪ್ರಕರಣ ನೇರವಾಗಿ ಸಿಎಂ ಕುಟುಂಬವೇ ಸಿಲುಕಿದೆ. ಇನ್ನು, ವಕ್ಫ್​​​​ನಿಂದ ರೈತರು ಮತ್ತು ದೇವಾಲಯಗಳಿಗೆ ಜಾರಿಯಾದ ನೋಟಿಸ್ ದೊಡ್ಡ ಸಂಚಲನವೇ ಸೃಷ್ಟಿ ಆಗಿದೆ. ಇತ್ತ, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಸರಣಿ, ರಾಜ್ಯವನ್ನೇ ತಲೆತಗ್ಗಿಸುವಂತೆ ಮಾಡಿದೆ. ಯಥಾ ಪ್ರಕಾರ ಗ್ಯಾರಂಟಿಗಳ ಅನುಷ್ಠಾನದಲ್ಲಿ ಲೋಪದ ಜೊತೆ ಅಭಿವೃದ್ಧಿ ಸಂಪೂರ್ಣ ಕುಸಿದಿದೆ ಅನ್ನೋದು ಕಾಂಗ್ರೆಸ್​​ನ ಶಾಸಕರೇ ಹೇಳಿಕೊಳ್ತಿದ್ದಾರೆ.

ಇದೆಲ್ಲದರ ಬಗ್ಗೆ ವಿಷಯ ಪ್ರಸ್ತಾಪಿಸಿ ಕೈ ಸರ್ಕಾರವನ್ನು ಬಿಜೆಪಿ ಕಟ್ಟಿ ಹಾಕಬಹುದು. ಬಿಜೆಪಿ ಸಿದ್ಧವಾಗಿಟ್ಟುಕೊಂಡಿರುವ ಬಾಣಗಳಿಗೆ ಕಾಂಗ್ರೆಸ್ ನಾಯಕರು ಕೊರೊನಾ ಹಗರಣದ ಪ್ರತ್ಯಸ್ತ್ರ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ವಕ್ಫ್ ವಿಚಾರ ಮುಂದಿಟ್ಟರೆ, ಯತ್ನಾಳ್ ಪ್ರತ್ಯೇಕ ಹೋರಾಟ ಪ್ರಸ್ತಾಪಿಸಿ ತಿವಿಯುವ ಸಾಧ್ಯತೆ ಇದೆ. ಇದನ್ನರಿತ ಬಿಜೆಪಿ ನಾಯಕರು ಯತ್ನಾಳ್‌ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಹೋರಾಡಲು ಕೌಂಟರ್ ಪ್ಲ್ಯಾನ್ ಮಾಡಿದ್ದಾರೆ. ಇದಕ್ಕೆ ಯತ್ನಾಳ್ ಕೂಡಾ ಜೈ ಎಂದಿದ್ದಾರೆ. ನಮ್ಮ ಆಂತರಿಕ ಜಗಳ ಏನೇ ಇರಲಿ, ರಾಜ್ಯದ ಹಿತಾಸಕ್ತಿಗಾಗಿ ಆರ್ ಅಶೋಕ್ ನೇತೃತ್ವದಲ್ಲೇ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ರೈತರ ಜಮೀನಿನಲ್ಲಿ ವಕ್ಫ್ ಹೆಸರು ಉಲ್ಲೇಖ ವಿಚಾರ ಬಿಜೆಪಿ ನಾಯಕರಿಗೆ ಮತ್ತೊಂದು ಪ್ರಮುಖ ಅಸ್ತ್ರವಾಗಿದೆ. ಇದೇ ವಿಚಾರಕ್ಕೆ ಬಿಜೆಪಿ ನಾಯಕರು ಪ್ರತಿಭಟಿಸಿದ್ದಾರೆ. ಯತ್ನಾಳ್ ಬಣ, ವಿಜಯೇಂದ್ರ ಟೀಂ, ಆರ್.ಅಶೋಕ್ ಸೇರಿ ಬಿಜೆಪಿ ನಾಯಕರು ರೈತರ ಬಳಿ ವಕ್ಫ್ ವಿಚಾರವಾಗಿ ಮಾಹಿತಿ ಸಂಗ್ರಹಿಸಿದ್ದು, ಇದನ್ನ ಸದನದ ಮುಂದಿಡಲಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಪ್ರತ್ಯಸ್ತ್ರ ಸಿದ್ಧಪಡಿಸಿಕೊಂಡಿದ್ದು, ಬಿಜೆಪಿ ಅವಧಿಯಲ್ಲಿಯೇ ರೈತರಿಗೆ ಹೆಚ್ಚು ನೋಟಿಸ್ ನೀಡಲಾಗಿದೆ.

ನಿಮ್ಮ ಅವಧಿಯಲ್ಲಿ ನೋಟಿಸ್ ನೀಡಿದಾಗ ಎಲ್ಲಿ ಹೋಗಿದ್ದಿರಿ ಎಂದು ತಿರುಗೇಟು ಕೊಡಲಿದ್ದಾರೆ. ಅಲ್ಲದೇ, ಯಾರ ಅವಧಿಯಲ್ಲಿ ಎಷ್ಟು ರೈತರಿಗೆ ನೋಟಿಸ್ ಎಂಬುದರ ಕುರಿತ ಅಂಕಿ ಅಂಶಗಳನ್ನು ಕೂಡ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದಿಷ್ಟೇ ಅಲ್ಲ, ವಾಲ್ಮೀಕಿ ನಿಗಮ, ಮುಡಾ ಅಕ್ರಮ ವಿಷಯವನ್ನು ಕೂಡ ಬಿಜೆಪಿ ಸದನದಲ್ಲಿ ಅಸ್ತ್ರವನ್ನಾಗಿ ಬಳಸಿಕೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸುವ ಸಾಧ್ಯತೆ ಇದೆ.


Spread the love

LEAVE A REPLY

Please enter your comment!
Please enter your name here