ಬೆಳಗಾವಿ:- ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ತಳ್ಳುಗಾಡಿ ಬಳಸಿ ಎಟಿಎಂ ಯಂತ್ರವನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಜರುಗಿದೆ.
ಖದೀಮರು, ಡಿ. 2ರ ನಸುಕಿನ ಜಾವ 3 ಗಂಟೆಯ ವೇಳೆಗೆ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಇಂಡಿಯಾ ಒನ್ ಎಟಿಎಂಗೆ ಕನ್ನ ಹಾಕಿದ್ದಾರೆ. ಮೂರು ಜನ ಕಳ್ಳರು ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಗ್ಯಾಸ್ ಕಟ್ಟರ್ ಯಂತ್ರವನ್ನು ಹೊತ್ತುಕೊಂಡು ಬಂದಿದ್ದಾರೆ. ಸರ್ವಿಸ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಕಳ್ಳರ ವಾಹನದಲ್ಲಿ ಬಾರದೇ ಅಲ್ಲೇ ಪಕ್ಕದಲ್ಲೇ ಇದ್ದ ತಳ್ಳು ಗಾಡಿ ತಂದು ಎಟಿಎಂ ಮುಂದೆ ನಿಲ್ಲಿಸಿದ್ದಾರೆ.
ಒಳ ಹೋಗಿ ಮೊದಲು ಸೈರನ್‌ಗೆ ಬ್ಲ್ಯಾಕ್ ಸ್ಪ್ರೇ ಹೊಡೆದಿದ್ದಾರೆ. ಸೈರನ್ ಬಂದ್ ಆಗಿರುವುದನ್ನು ದೃಢಪಡಿಸಿದ ಬಳಿಕ ಗ್ಯಾಸ್ ಕಟ್ಟರ್ ಬಳಸಿ ಯತ್ರವಿದ್ದ ಬಾಕ್ಸ್ ಓಪನ್ ಮಾಡಿದ್ದಾರೆ. ನಂತರ ತಳ್ಳು ಗಾಡಿಯಲ್ಲಿ ಯತ್ರವನ್ನು ಇಟ್ಟುಕೊಂಡು ಇನ್ನೂರು ಮೀಟರ್ ತಳ್ಳಿಕೊಂಡು ವಾಹನದತ್ತ ಬಂದಿದ್ದಾರೆ. ಬಳಿಕ ಎಟಿಎಂ ಯಂತ್ರವನ್ನು ವಾಹನದ ಒಳಗಡೆ ಹಾಕಿ ಮತ್ತೆ ಆ ತಳ್ಳು ಗಾಡಿಯನ್ನು ಎಟಿಎಂ ಮುಂದೆ ನಿಲ್ಲಿಸಿ ಖದೀಮರು ಎಸ್ಕೇಪ್ ಆಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸೋಕೋ ಟೀಮ್ ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.



