ದೇವರು, ಧರ್ಮದಲ್ಲಿ ನಂಬಿಕೆ ಇರಲಿ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ನ್ಯಾಮತಿ: ಶಿವ ಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ದೇವರು ಕೊಟ್ಟ ಕೊಡುಗೆ ಅಮೂಲ್ಯ. ಅರಿವುಳ್ಳ ಮಾನವ ಜನ್ಮದಲ್ಲಿ ಹುಟ್ಟಿದ ಮೇಲೆ ಒಂದಿಷ್ಟಾದರೂ ಶಿವಧ್ಯಾನ ಮಾಡದಿದ್ದರೆ ಜೀವನ ನಿರರ್ಥಕ. ಸಂಸ್ಕಾರ ಕೊಡುವ ಶ್ರೀ ಗುರುವನ್ನು ನಿರ್ಲಕ್ಷ ಮಾಡಬಾರದು. ದೇವರು ಮತ್ತು ಧರ್ಮದಲ್ಲಿ ಶ್ರದ್ಧೆಯಿಡಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಶುಕ್ರವಾರ ತಾಲೂಕಿನ ದೊಡ್ಡತ್ತಿನಹಳ್ಳಿ ಗ್ರಾಮದಲ್ಲಿ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಮೊದಲ್ಗೊಂಡು ಇನ್ನಿತರ ದೇವಾಲಯಗಳ ಉದ್ಘಾಟನೆ, ಕಳಸಾರೋಹಣ ಅಂಗವಾಗಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ದೇವನೊಬ್ಬ-ನಾಮ ಹಲವು ಎಂಬ ಗಾದೆ ಮಾತಿನಂತೆ ಒಬ್ಬ ಭಗವಂತನಿಗೆ ಸಹಸ್ರಾರು ಹೆಸರುಗಳಿವೆ. ಯಾವ ಹೆಸರಿನಿಂದ ಕರೆದರೂ ಓಗೊಡುವ ಪರಮಾತ್ಮ ಒಬ್ಬನೇ ಆಗಿದ್ದಾನೆ ಎಂಬ ಪರಮ ಸತ್ಯವನ್ನು ಅರಿತು ಬಾಳಿದಾಗ ಎಲ್ಲೆಡೆ ಸಾಮರಸ್ಯ ಸೌಹಾರ್ದತೆ ಬೆಳೆದು ಬರಲು ಸಾಧ್ಯವಾಗುತ್ತದೆ. ಮನುಷ್ಯನ ಬುದ್ಧಿಶಕ್ತಿ ಬೆಳೆದಂತೆ ಭಾವನೆಗಳು ಬೆಳೆಯಲಾರದ ಕಾರಣ ಇಂದಿನ ಎಲ್ಲ ಅವಾಂತರಗಳಿಗೆ ಕಾರಣವೆಂದರೆ ತಪ್ಪಾಗದು. ದೇವರು ಧರ್ಮ ಜಾತಿ ಪ್ರಾಂತೀಯ ಹೆಸರಿನಲ್ಲಿ ಅನೇಕ ದುರಂತಗಳು ನಡೆಯುತ್ತಿರುವುದು ನೋವಿನ ಸಂಗತಿ.

ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಜಾತಿ-ಮತ-ಪಂಥಗಳನ್ನು ಮೀರಿ ವಿಶ್ವಬಂಧುತ್ವದ ಆದರ್ಶ ಮೌಲ್ಯಗಳನ್ನು ಬೋಧಿಸಿದ್ದಾರೆ. ಬದುಕಿ ಬಾಳುವ ಜನಾಂಗಕ್ಕೆ ಅವರ ವಿಚಾರಧಾರೆಗಳು ದಾರಿ ದೀಪ. ದೊಡ್ಡತ್ತಿನಹಳ್ಳಿ ಗ್ರಾಮದಲ್ಲಿ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನ ಮೊದಲ್ಗೊಂಡು ಹಲವಾರು ದೇವಾಲಯಗಳು ಪುನರ್ ನಿರ್ಮಿಸಿ, ಇಂದು ಲೋಕಾರ್ಪಣೆ ಮಾಡಿರುವುದು ಹೆಮ್ಮೆಯ ಸಂಗತಿ. ಜನ ಕಲ್ಯಾಣ ಸದುದ್ದೇಶದಿಂದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಸಕಲ ಭಕ್ತರಿಗೆ ಶುಭ ಹಾರೈಸಿದ್ದೇವೆ. ತಮ್ಮೆಲ್ಲರಲ್ಲಿ ಸ್ವಾಭಿಮಾನ ಧರ್ಮ ನಿಷ್ಠೆ ಇರುವುದನ್ನು ಕಂಡು ಸಂತೋಷವಾಗಿದೆ. ಬೆಳೆಯುತ್ತಿರುವ ಯುವ ಜನಾಂಗ ಧರ್ಮದ ದಾರಿಯಲ್ಲಿ ಮುನ್ನಡೆಯಬೇಕೆಂದು ನುಡಿದರು.

ಹೊನ್ನಾಳಿ ಶಾಸಕ ಜಿ.ಡಿ. ಶಾಂತನಗೌಡ್ರು ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಿರಿಯರ ಆದರ್ಶ ಚಿಂತನೆಗಳು ಯುವ ಜನಾಂಗಕ್ಕೆ ಆಶಾಕಿರಣ. ಹೊಸ ಚಿಗುರು ಹಳೇ ಬೇರಿನಿಂದ ಮರಕ್ಕೆ ಶೋಭೆ ಬರುವಂತೆ ಹಳೆಯದು-ಹೊಸತು ಸೇರಿದರೆ ಉಜ್ವಲ ಬದುಕು ಪ್ರಾಪ್ತವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲವೆಂದರು.

ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ವೀರಶೈವ ಧರ್ಮ ಸಂಸ್ಕೃತಿ ಮತ್ತು ಗುರು ಪರಂಪರೆಯ ಆದರ್ಶ ಮೌಲ್ಯಗಳನ್ನು ಪರಿಪಾಲಿಸಿಕೊಂಡು ಬರಬೇಕೆಂದರು.

ಹಾರನಹಳ್ಳಿ ರಾಮಲಿಂಗೇಶ್ವರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು, ರಾಂಪುರದ ಶಿವಕುಮಾರ ಹಾಲಸ್ವಾಮಿಗಳು, ಗೋವಿನಕೆರೆ ವಿಶ್ವಾರಾಧ್ಯ ಹಾಲಸ್ವಾಮಿಗಳು, ನ್ಯಾಮತಿ ಕೋಹಳ್ಳಿ ಹಿರೇಮಠದ ಎಸ್.ಕೆ. ವಿಶ್ವಾರಾಧ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ನ್ಯಾಮತಿ ಬನಶಂಕರಿ ಮಹಿಳಾ ಬಳಗದವರಿಂದ ಪ್ರಾರ್ಥನೆ ಜರುಗಿತು. ಶಿವಮೊಗ್ಗದ ಶಾಂತಾ ಆನಂದ್ ನಿರೂಪಿಸಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ದೊಡ್ಡತ್ತಿನಹಳ್ಳಿ ಯುವ ಜನತೆ ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ್ದು ಸಂತೋಷದ ವಿಚಾರ. ಇಂಥ ಮನೋಭಾವನೆ ಈ ಕಾರ್ಯಕ್ರಮಕ್ಕೆ ಅಷ್ಟೇ ಸೀಮಿತಗೊಳ್ಳಬಾರದು. ನಿರಂತರ ಬದುಕಿನಲ್ಲಿ ಗುರುವಿನ ಮಾರ್ಗದರ್ಶನ ಪಡೆದು ಸನ್ಮಾರ್ಗದಲ್ಲಿ ನಡೆಯಬೇಕೆಂದರು.


Spread the love

LEAVE A REPLY

Please enter your comment!
Please enter your name here