ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ಸಭಾಪತಿ ಬಸವರಾಜ ಹೊರಟ್ಟಿಯವರು ಕೆಲ ಕಿವಿ ಮಾತುಗಳನ್ನು ಹೇಳುವ ಮೂಲಕ, ನಿಮ್ಮ ಮೇಲೆ ನಂಬಿಕೆಯಿಟ್ಟು ಪರೀಕ್ಷೆ ಬರೆದು ವಿಜಯಿಗಳಾಗಿ ಎಂದು ಶುಭ ಹಾರೈಸಿದ್ದಾರೆ.
ನಿಮ್ಮ ಬದುಕಿನ ಮಹತ್ವಪೂರ್ಣಘಟ್ಟ, 21-03-2025ರಿಂದ ನಡೆಯುವ ವಾರ್ಷಿಕ ಪರೀಕ್ಷಾ ತಯಾರಿಯ ಅಂತಿಮ ಹಂತದಲ್ಲಿದ್ದೀರಿ. ವರ್ಷವಿಡೀ ಓದಿದ ಜ್ಞಾನವನ್ನು ಒರೆಗೆ ಹಚ್ಚುವ ಸಂದರ್ಭವಿದು. ಶಾಲೆಗಳಲ್ಲಿ ನಿಮ್ಮ ಗುರುಗಳ ಪಾಠಗಳು, ತಂದೆ-ತಾಯಿಯರ ಕಾಳಜಿ, ಇಲಾಖೆಯ ಎಲ್ಲಾ ಅಧಿಕಾರಿಗಳ ಮಾರ್ಗದರ್ಶನ, ನಿಮ್ಮೆಲ್ಲ ಪ್ರಯತ್ನಕ್ಕೆ ಫಲ ಸ್ವೀಕರಿಸುವ ಕಾಲ ಸನ್ನಿಹಿತವಾಗಿದೆ. ಭಯಪಡದೆ ಪರೀಕ್ಷೆ ಎದುರಿಸಿ. ಪರೀಕ್ಷೆ ಇರುವುದು ನಿಮ್ಮ ಪ್ರಯತ್ನಕ್ಕೆ ಹೊರತು ಜೀವನಕ್ಕಲ್ಲ.
ರಾಜ್ಯದ ಶಾಲೆಗಳು ಕಲಿಕೆಗೆ ಪೂರಕವಾದ ಮೂಲಭೂತ ಸೌಲಭ್ಯಗಳಲ್ಲಿ ಅನೇಕ ಶಾಲಾ ನೂತನ ಕಟ್ಟಡಗಳು, ಬೋಧನೆಗೆ ಅವಶ್ಯಕವಾಗಿರುವ ಹೆಚ್ಚುವರಿ ಕೊಠಡಿಗಳು, ಗ್ರಂಥಾಲಯಗಳು, ಪ್ರಯೋಗಾಲಯಗಳು, ಡಿಜಿಟಲ್ ಕೊಠಡಿಗಳು, ಶುದ್ಧ ಕುಡಿಯುವ ನೀರು, ಆಟದ ಮೈದಾನಗಳುಎಲ್ಲಾ ಸೌಲಭ್ಯಗಳನ್ನು ಹೊಂದಿ ಸದಾ ಕ್ರಿಯಾಶೀಲವಾಗಿವೆ ಎಂಬುದು ಹೆಮ್ಮೆಯ ಸಂಗತಿ. ಎಲ್ಲಾ ಅನುಕೂಲಗಳೊಂದಿಗೆ ಗುಣಮಟ್ಟದ ಶಿಕ್ಷಣ ಪಡೆದ ನೀವು ಜಾಗತಿಕ ರಂಗದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬುದು ನಮ್ಮ ಮಹದಾಸೆಯಾಗಿದೆ ಎಂದು ತಿಳಿಸಿದ್ದಾರೆ.