ಬಳ್ಳಾರಿ: ಜಿಲ್ಲೆಯಲ್ಲಿ ಬ್ಯಾನರ್ ಹಾಗೂ ವಾಲ್ಮೀಕಿ ಪುತ್ಥಳಿ ಸಂಬಂಧ ನಡೆದ ಗಲಾಟೆ ಪ್ರಕರಣದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಶುಕ್ರವಾರ (ಜ.2) ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ಕಾರ್ಯಕರ್ತ ನಾಗರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜನಾರ್ದನ ರೆಡ್ಡಿ ಅವರು ಹಲ್ಲೆ ಹಾಗೂ ಕೊಲೆ ಯತ್ನ ಆರೋಪದಡಿ ದೂರು ಸಲ್ಲಿಸಿದ್ದರೆ, ನಾಗರಾಜ್ ಅವರು ಅಕ್ರಮ ಪ್ರವೇಶ, ಜಾತಿ ನಿಂದನೆ, ಕೊಲೆ ಯತ್ನ ಹಾಗೂ ಗಲಾಟೆ ಆರೋಪ ದಾಖಲಿಸಿದ್ದರು.
ದೂರಿನ ಆಧಾರದಲ್ಲಿ ಶಾಸಕ ನಾರಾ ಭರತ್ ರೆಡ್ಡಿ, ಸತೀಶ್ ರೆಡ್ಡಿ, ಚಾನಾಳ್ ಶೇಖರ್, ನಾರಾ ಪ್ರತಾಪ್ ರೆಡ್ಡಿ, ನಾರಾ ಸೂರ್ಯನಾರಾಯಣ ರೆಡ್ಡಿ ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಹಲವು ನಾಯಕರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



