ಬಳ್ಳಾರಿ: ನಗರದಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ಕುಟುಂಬವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಭೇಟಿ ಮಾಡಿ ಸಾಂತ್ವನ ಹೇಳಿದರು. ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನದ ವೇಳೆಗೆ ರಾಜಶೇಖರ್ ಅವರ ಮನೆಗೆ ಆಗಮಿಸಿದ ಡಿಸಿಎಂ, ಮೃತರ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಮೊನ್ನೆ ನಡೆದ ಗಲಭೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ಈ ಘಟನೆ ನಡೆಯಬಾರದಾಗಿತ್ತು. ಮೃತ ವ್ಯಕ್ತಿಯ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ. ಕುಟುಂಬದ ಜೊತೆಗೆ ಪಕ್ಷವೂ ಇದೆ ಎಂಬ ಸಂದೇಶ ನೀಡಲು ಬಂದಿದ್ದೇನೆ” ಎಂದು ಹೇಳಿದರು.
ಮೃತರ ಕುಟುಂಬ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ವಿಚಾರ ಮಾಡಲಾಗುತ್ತದೆ. ಪ್ರಕ್ರಿಯೆಗಳನ್ನು ಪರಿಶೀಲಿಸಿ, ಕಾನೂನು ಚೌಕಟ್ಟಿನ ಅಡಿಯಲ್ಲಿ ಉದ್ಯೋಗ ಕಲ್ಪಿಸಲು ಪ್ರಯತ್ನ ಮಾಡಲಾಗುವುದು” ಎಂದು ಭರವಸೆ ನೀಡಿದರು. ಉಳಿದ ವಿಚಾರಗಳ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಕೂಡ ಉಪಸ್ಥಿತರಿದ್ದರು.



