ಬೇಂದ್ರೆ ಶುದ್ಧ ಆಧ್ಯಾತ್ಮಿಕ ಒಲವುಳ್ಳ ಕವಿ

0
bendre
Spread the love

ವಿಜಯಸಾಕ್ಷಿ ಸುದ್ದಿ, ಗದಗ : ವರಕವಿ ಬೇಂದ್ರೆ ಕಾಲಾತೀತ ಪ್ರಜ್ಞೆಯುಳ್ಳ ಕವಿಯಾಗಿದ್ದು, ಸರಳ ಆಡು ಭಾಷೆಯಲ್ಲಿ ಕವನ ರಚಿಸುವುದರ ಜೊತೆಗೆ ಅಪಾರ ನೋವು, ಬಡತನದ ಒಗರನ್ನು ಉಂಡು ಸ್ವಾಭಿಮಾನ, ಸ್ವ-ಪ್ರತಿಷ್ಠೆಯಿಂದ ಬದುಕಿ ಆಧ್ಯಾತ್ಮಿಕ ಸಂಪತ್ತನ್ನು ಗಳಿಸಿಕೊಂಡಿದ್ದರು. ತಮ್ಮ ನೋವನ್ನು ತಮ್ಮೊಳಗೇ ನಿವಾರಿಸಿಕೊಳ್ಳುವ ಶುದ್ಧ ಆತ್ಮ ಶಕ್ತಿಯನ್ನು ವರಕವಿ ಬೇಂದ್ರೆ ಬೆಳೆಸಿಕೊಂಡಿದ್ದರು ಎಂದು ಗದುಗಿನ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿಗಳಾದ ವೇ.ಮೂ. ಮಹೇಶ್ವರಸ್ವಾಮಿಗಳು ಹೊಸಳ್ಳಿಮಠ ನುಡಿದರು.

Advertisement

ಮಾಸಿಕ ಶಿವಾನುಭವ ಕಾರ್ಯಕ್ರಮದ 321ನೇ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಡಾ. ಸಂಗಮೇಶ ತಮ್ಮನಗೌಡ್ರ ಬಹುವರ್ಷಗಳಿಂದ ರಾಮಗಿರಿಯಲ್ಲಿ ವರಕವಿ ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯನ್ನು ಕಟ್ಟಿಕೊಂಡು ಬೇಂದ್ರೆಯವರ ಕಟ್ಟಾ ಅಭಿಮಾನಿಗಳಾಗಿ ಕಳೆದ 24 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಬೇಂದ್ರೆಯವರ ಕುರಿತು ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಬೇಂದ್ರೆ ಸಾಹಿತ್ಯ ಪ್ರಚಾರದ ಮೂಲಕ ಗಳಿಸಿಕೊಂಡವರಾಗಿದ್ದಾರೆ. ಬೇಂದ್ರೆ ಸಾಹಿತ್ಯ ಪ್ರಚಾರದ ಅವರ ಕಾರ್ಯ ಸ್ತುತ್ಯಾರ್ಹವಾದುದು ಎಂದು ನುಡಿದರು.

ಅಕ್ಕಲಕೋಟೆಯ ಗೋಂದವಿಲೇಕರ ಮಹಾರಾಜರು, ಪಾಂಡಿಚೇರಿಯ ಅರವಿಂದ ಆಶ್ರಮದ ಅರವಿಂದರು ಮತ್ತು ಶ್ರೀ ಮಾತಾ, ಪಂಡರಾಪುರದ ಪಾಂಡುರಂಗ ವಿಠಲ ಮತ್ತು ರವೀಂದ್ರನಾಥ ಟ್ಯಾಗೋರ ಅವರ ಅಪ್ಪಟ ಅನುಯಾಯಿಯಾಗಿದ್ದ ವರಕವಿ ಬೇಂದ್ರೆಯವರು ಶುದ್ಧ ಆತ್ಮತತ್ವದಲ್ಲಿ ನಂಬಿಗೆ ಇಟ್ಟು ಇವರನ್ನು ಸ್ಮರಿಸುವ ಹಲವಾರು ಕವನಗಳನ್ನು ರಚಿಸಿದ್ದಾರೆ. ಅವರ ಕಾವ್ಯದ ಸಿಂಹಪಾಲು ಆಧ್ಯಾತ್ಮಿಕ ಗೀತೆಗಳು ನಾಕುತಂತಿ ಕೃತಿಯಲ್ಲಿ ಕಂಡು ಬರುತ್ತವೆ. ಆ ಕವನಗಳನ್ನು ಓದಿದಾಗ ಜೀವಾನಂದ ಮತ್ತು ಆತ್ಮಾನಂದ ಗಳಿಸುವ ಚುಂಬಕ ಶಕ್ತಿ ಅವುಗಳಲ್ಲಿದೆ ಎಂದರು.

ಕು.ಸೌಜನ್ಯ ಸಿದ್ರಾಮಯ್ಯ ಕಟಗಿಹಳ್ಳಿಮಠ ಪ್ರಾರ್ಥನೆ ಗೀತೆ ಹಾಡಿದರು. ಅಡವೀಂದ್ರ ಮಠದ ಕಾರ್ಯದರ್ಶಿ ವಿನಾಯಕ ಸಜ್ಜನ ಸ್ವಾಗತಿಸಿದರು. ವೇದಿಕೆಯ ಮೇಲೆ ವ್ಹಿ.ಎಮ್. ಕಾಳಗಿ, ಬಸಲಿಂಗಯ್ಯಶಾಸ್ತಿಗಳು ಹಿರೇಮಠ, ಜ್ಞಾನ ಯೋಗಕೇಂದ್ರದ ಯೋಗಾದರರು, ಜಲ್ಲಿಗೇರಿಯ ಶರಣಮ್ಮತಾಯಿ ಆಶ್ರಮದ ಚನ್ನಬಸವ ಶರಣರು ಮುಂತಾದವರು ಉಪಸ್ಥಿತರಿದ್ದರು. ವೀರೇಶ್ವರ ಪುಣ್ಯಾಶ್ರಮದ ಗುರುಗಳಾದ ಶ್ರೀಶೈಲ ಚಿಕ್ಕಮಠ, ಸೌಜನ್ಯ ಕಟಗಿಹಳ್ಳಿಮಠ, ತಬಲಾ ಸಾತ್ ನೀಡಿದ ಅಕ್ಷಯ ಜಮಖಂಡಿ ತಮ್ಮ ಸಂಗೀತ ವಾದನ ಮತ್ತು ಗಾಯನದ ಮೂಲಕ ಗಮನ ಸೆಳೆದರು.

ಕಡಕೋಳದ ಕೆ.ಜಿ. ಸೋನಾರ ಬೇಂದ್ರೆ ಸಾಹಿತ್ಯ ಅಭಿಮಾನಿಗಳಾದ ಕೆ.ಎಂ. ಹೊಂಬಾಳಿಮಠ, ಗೀತಾ ಹೂಗಾರ ಮುಂತಾದವರು ಪಾಲ್ಗೊಂಡಿದ್ದರು.

ಶಿವಾನುಭವ ಸಮಿತಿಯ ಅಧ್ಯಕ್ಷ ವ್ಹಿ.ಎಮ್. ಕುಂದ್ರಾಳ ಹಿರೇಮಠರು ಮಾತನಾಡಿ, ಇಂದಿನ ಕಾರ್ಯಕ್ರಮವು ನಮ್ಮ ಶಿವಾನುಭವ ಸಮಿತಿಯಲ್ಲಿಯೇ ಆಯೋಜನೆಗೊಳಿಸಿದ ಕಾರ್ಯಕ್ರಮಗಳಿಗಿಂತ ವಿಶಿಷ್ಠವಾಗಿ ವಾಚನ ಮತ್ತು ಗಾಯನದ ಮರೆಯದ ಕಾರ್ಯಕ್ರಮವಾಗಿದ್ದು, ಡಾ. ಸಂಗಮೇಶ ತಮ್ಮನಗೌಡ್ರ ಬೇಂದ್ರೆಯವರ ಕುರಿತು ವಾಸ್ತವಿಕ ನೆಲೆಗಟ್ಟಿನಲ್ಲಿ ಮಾತನಾಡುವ ಶ್ರೇಷ್ಠ ಸಾಹಿತಿಗಳಾಗಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here